Saturday, December 7, 2024

Latest Posts

ದೇವೇಗೌಡರು, ಕುಮಾರಸ್ವಾಮಿ ಅವರು ಒಬ್ಬೇ ಒಬ್ಬ ಒಕ್ಕಲಿಗರನ್ನೂ ಬೆಳೆಯಲು ಬಿಡಲ್ಲ: ಸಿಎಂ ಸಿದ್ದರಾಮಯ್ಯ

- Advertisement -

Political News: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ದೊಡ್ಡ ಮಳೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿಂದು ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಅಲ್ಲಿನ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಕ್ಷೇತ್ರದ ಅಭಿವೃದ್ಧಿಯಲ್ಲಿ – ರೈತರಿಗೆ ನೀರು ಕೊಡುವುದರಲ್ಲಿ ನಮ್ಮ ಯೋಗೇಶ್ವರ್ ಆಧುನಿಕ ಭಗೀರಥ. ಯೋಗೇಶ್ವರ್ ಅವರು ಚನ್ನಪಟ್ಟಣ ಮಣ್ಣಿನ ಮೇಲೆ, ಇಲ್ಲಿನ ರೈತ ಸಮುದಾಯ, ಇಲ್ಲಿನ ಪಶುಪಾಲಕರು, ಗೋ ಸಾಕಾಣಿಕೆದಾರರ ಮೇಲೆ ಅಪಾರ ಪ್ರೀತಿ, ಗೌರವ ಹಾಗೂ ಕಾಳಜಿ ಇಟ್ಟುಕೊಂಡಿದ್ದಾರೆ. ಹೀಗಾಗಿ ರೈತ ಕುಲದ ಉದ್ಧಾರಕ್ಕಾಗಿ ಕೆರೆಗಳನ್ನು ತುಂಬಿಸಿ ಪುಣ್ಯಾತ್ಮ‌ ಎನ್ನಿಸಿಕೊಂಡರು ಎಂದು ಸಿಪಿವೈ ಪರ ಸಿಎಂ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಮಂಡ್ಯ ಲೋಕಸಭೆಯಲ್ಲಿ, ರಾಮನಗರ ವಿಧಾನಸಭೆಯಲ್ಲಿ ನಿಖಿಲ್ ಸೋತಿದ್ದಾರೆ. ಈಗ ಚನ್ನಪಟ್ಟಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅವರ ಬಾವ, ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರ ಗೆಲುವಿಗೆ ಯೋಗೇಶ್ವರ್ ಅವರು ಬಹಳ ಶ್ರಮಿಸಿದರು. ಆಗಲೇ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಬೆಂಬಲಿಸಿ ಗೆಲ್ಲಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಬಂದಾಗ ಕೈ ಕೊಟ್ಟರು.‌ ಈಗ ಯೋಗೇಶ್ವರ್ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಚನ್ನಪಟ್ಟಣದ ಜನ ಮಾಡಬೇಕು.

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಬ್ಬೇ ಒಬ್ಬ ಒಕ್ಕಲಿಗರನ್ನೂ ಬೆಳೆಯಲು ಬಿಡಲ್ಲ. ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸ್ತಾರೆ, ಓಕೆ. ಆದರೆ, ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪುಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ಮುಗಿಸಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬುದ್ದಿವಂತ ಒಕ್ಕಲಿಗರನ್ನು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರನ್ನು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸ್ತಾರೆ. ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಅವರನ್ನೂ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ. ಆದರೆ ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ, ಬೇಗ ಹೊರಗೆ ಬಂದ್ರೆ ನಿಮಗೆ ಒಳ್ಳೆಯದು ಎಂದು ಎಚ್ಚರಿಸಿದ್ದೀನಿ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು ಇನ್ನು ಯೋಗೇಶ್ವರ್ ಅವರನ್ನು ಸಹಿಸ್ತಾರಾ?

ಭಾರತ ಮೋದಿಯವರಂತಹಾ ಸುಳ್ಳ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುವುದಾಗಿ ದೇವೇಗೌಡರು ಹೇಳಿದ್ದರು. ಈಗ ಮೋದಿಯವರನ್ನು ಯದ್ವಾತದ್ವಾ ಹೊಗಳುತ್ತಿದ್ದಾರೆ ಎಂದು ಹೆಚ್ಡಿಡಿ ವಿರುದ್ಧ ಸಿಎಂ ವ್ಯಂಗ್ಯವಾಡಿದ್ದಾರೆ.‌

ನಾನು, ಜಾಲಪ್ಪ ಅವರು ಇಲ್ಲದೇ ಹೋಗಿದ್ದರೆ 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರಲಿಲ್ಲ. ದೇವೇಗೌಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ರಾಷ್ಟ್ರೀಯ ಅಧ್ಯಕ್ಷರಾದ ಎಸ್.ಆರ್.ಬೊಮ್ಮಾಯಿ ಸಿದ್ಧರಿರಲಿಲ್ಲ. ಏಕೆಂದರೆ ಇವರು ಬೊಮ್ಮಾಯಿ ಸರ್ಕಾರವನ್ನು ಕೆಡವಿದ್ದರು. ಆದರೂ ಆ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿ ದೇವೇಗೌಡರ ಪರವಾಗಿ ನಿಂತೆವು. ಈಗ ಸಿದ್ದರಾಮಯ್ಯ ಅವರಿಗೆ ಸೊಕ್ಕು, ಅಹಂ ಎನ್ನುತ್ತಿದ್ದಾರೆ. ಇದು ಪಾಳೇಗಾರಿಕೆ ಅಲ್ವಾ ದೇವೇಗೌಡರೇ? ಆಕಸ್ಮಿಕವಾಗಿ ಪ್ರಧಾನಿ ಆದ ದೇವೇಗೌಡರು ಪಾಳೆಗಾರಿಕೆ ಮಾತ್ರ ಬಿಡಲ್ಲ. ದಲಿತರು, ಹಿಂದುಳಿದವರನ್ನು ಕಂಡ್ರೆ ಆಗಲ್ಲ. ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ. ಇದೆಲ್ಲಾ ಪಾಳೇಗಾರಿಕೆ ಅಲ್ವಾ? ಎಂದು ಸಿಎಂ ಪ್ರಶ್ನಿಸಿದ್ದಾರೆ. 

ಮೊಮ್ಮಗನಿಗಾಗಿ ಒಂದು ವಾರದಿಂದ ಚನ್ನಪಟ್ಟಣದಲ್ಲೇ ಇದ್ದಾರೆ. ಜೆಡಿಎಸ್ ಅಥವಾ ಬಿಜೆಪಿಯಿಂದ ಬೇರೆ ಯಾರಾದರೂ ನಿಂತಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಚನ್ನಪಟ್ಟಣದಲ್ಲಿ ನಿಂತು ಮತ ಕೇಳ್ತಿದ್ರಾ ? ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧಿಸಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಇದ್ದು ಮತ ಕೇಳ್ತಿದ್ರಾ? ಇರಲಿ, ಚನ್ನಪಟ್ಟಣಕ್ಕೆ ಏನು ಮಾಡಿದ್ದೀರಿ ಎನ್ನುವುದನ್ನು ಕ್ಷೇತ್ರದ ಜನತೆ ಕೇಳಬೇಕು. ಬರೀ ಕಣ್ಣೀರು ಹಾಕೋದಲ್ಲ. ಅತ್ಯಾಚಾರಕ್ಕೆ ಒಳಗಾದ ಹಾಸನದ ಹೆಣ್ಣು‌ಮಕ್ಕಳ ಪರವಾಗಿ ಪಾಪ ದೇವೇಗೌಡರಿಗೆ ಕಣ್ಣೀರೇ ಬರಲಿಲ್ಲ.

ನಾನು ಎರಡನೇ ಬಾರಿ ಮುಖ್ಯಮಂತ್ರಿ ಆದೆ ಎಂದು ದೇವೇಗೌಡರಿಗೆ ಹೊಟ್ಟೆಯುರಿ. ಅದಕ್ಕೇ ನಮ್ಮ ಸರ್ಕಾರ ಕಿತ್ತಾಕುತ್ತೇವೆ ಎನ್ನುತ್ತಿದ್ದಾರೆ. ರಾಜ್ಯದ ಜನತೆ ಆರಿಸಿರುವ ನಮ್ಮ‌ ಸರ್ಕಾರವನ್ನು ಹೆಚ್.ಡಿ.ಕುಮಾರಸ್ವಾಮಿ, ದೇವೇಗೌಡರಿಂದ ಕೀಳಲು ಸಾಧ್ಯವಿಲ್ಲ. ನಿಮ್ಮ ಹೊಟ್ಟೆಯುರಿ ನಿಮ್ಮನ್ನೇ ಸುಡತ್ತೆ ಹೊರತು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ದೇವೇಗೌಡರೇ ಎಂದು ಸಿಎಂ ಕಿಡಿಕಾರಿದ್ದಾರೆ.

ಮೊದಲ ಬಾರಿ ಸಿಎಂ ಆಗಿ ಹತ್ತು ಹಲವು ಭಾಗ್ಯಗಳನ್ನು ನೀಡಿದೆ. ಎರಡನೇ ಬಾರಿ ಸಿಎಂ ಆಗಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ನಮ್ಮ ಸಾಧನೆಯ ಸಾಕ್ಷಿ ರಾಜ್ಯದ ಜನತೆಯ ಎದುರಿಗೆ ಇಟ್ಟಿದ್ದೀವಿ. ಕುಮಾರಸ್ವಾಮಿ ಅವರೇ, ನೀವು ಏನು ಸಾಧನೆ ಮಾಡಿದ್ದೀರಿ? ಚನ್ನಪಟ್ಟಣ ಜನತೆಯ ಎದುರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ? 400 ಕೋಟಿ ವೆಚ್ಚದ ಹಾಲಿನ ಪುಡಿ ಘಟಕ ಮಾಡಿದ್ದು ನಾವು. ಕನಕಪುರದಲ್ಲಿ 2016 ರಲ್ಲಿ ಡೈರಿ ಸಂಕೀರ್ಣವನ್ನು 700 ಕೋಟಿ ರೂ. ವೆಚ್ಚದಲ್ಲಿ ಮಾಡಿದ್ದು ನಾವು. ಇಂಥವು ಇನ್ನೂ ಪಟ್ಟಿ ದೊಡ್ಡದಿದೆ. ಕುಮಾರಸ್ವಾಮಿ ಅವರು ಇಂಥಾ ಒಂದೇ ಒಂದನ್ನು ಮಾಡಿದ್ದಾರಾ ಹೇಳಿ ದೇವೇಗೌಡರೇ . ಇದನ್ನು ಚನ್ನಪಟ್ಟಣ ಜನತೆ ಕೂಡ ಕೇಳಬೇಕು.

ಚುನಾವಣೆ ಮುಗಿದ ಮೇಲೆ ಗೃಹಲಕ್ಷ್ಮಿ ಸೇರಿ ಗ್ಯಾರಂಟಿಗಳನ್ನು ಸರ್ಕಾರ ಬಂದ್ ಮಾಡುತ್ತದೆ ಎಂದು ದೇವೇಗೌಡರು ದೊಡ್ಡ ಸುಳ್ಳು ಹೇಳಿದ್ದಾರೆ. ದೇವೇಗೌಡರೇ ಒಂದು ಮಾತು ಹೇಳ್ತೀನಿ, ಸಿದ್ದರಾಮಯ್ಯ ಒಮ್ಮೆ ಮಾತು ಕೊಟ್ಟರೆ ಯಾವುದೇ ಕಾರಣಕ್ಕೂ ಮಾತು ತಪ್ಪಲ್ಲ. ನಮ್ಮ ಸರ್ಕಾರ ಯಾವ ಗ್ಯಾರಂಟಿಗಳನ್ನೂ ನಿಲ್ಲಿಸುವುದಿಲ್ಲ. ಇದಕ್ಕೆ ನಾನೇ ಗ್ಯಾರಂಟಿ. ವಕ್ಫ್ ವಿಚಾರದಲ್ಲೂ ಬಿಜೆಪಿ ಜೊತೆ ಸೇರಿ ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಅಧಿಕೃತ ಘೋಷಣೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

- Advertisement -

Latest Posts

Don't Miss