Dharwad News: ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಳ್ನಾವರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಳ್ನಾವರ ಮಾದರಿ ತಾಲೂಕು ಮಾಡುವಲ್ಲಿ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ತಾಲೂಕಿನ ಕಳಸಪ್ರಾಯವಾದ ಸುಂದರವಾದ ಪ್ರಜಾ ಸೌಧವನ್ನು ನಿರ್ಮಿಸಲು ಭೂಮಿ ಪೂಜೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್.ಲಾಡ್ ಅವರು ಹೇಳಿದರು.
ಅಳ್ನಾವರ ಪಟ್ಟಣ ಪಂಚಾಯತ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಅಳ್ನಾವರ ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೌಧ ಅಡಿಗಲ್ಲು ಸಮಾರಂಭ ಹಾಗೂ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಅಳ್ನಾವರ ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮತ್ತು ತಾಲೂಕಿನ ಕೇಂದ್ರ ಸ್ಥಾನ ಅಳ್ನಾವರ ಪಟ್ಟಣ ಹಾಗೂ ತಾಲೂಕಿನ ಪ್ರತಿ ಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧರಿರುವುದಾಗಿ ತಿಳಿಸಿದರು.
ಪ್ರಜಾಸೌಧ ನಿರ್ಮಿಸಲು ಸರ್ಕಾರ ರೂ.8.60 ಕೋಟಿ ಅನುದಾನ ನೀಡಿದ್ದು, ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಅಗತ್ಯ ಸೌಲಭ್ಯವಿರುವ ಆಕರ್ಷಕವಾದ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಮತ್ತು ರೂ.26.30 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಳ್ನಾವರ ನಾಡಕಚೇರಿ ಕಟ್ಟಡ, ರೂ. 50.13 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಳ್ನಾವರ ಪಶು ಆಸ್ಪತ್ರೆ ಕಟ್ಟಡ ಮತ್ತು 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಳ್ನಾವರ ಅಂಗನವಾಡಿ ನಂ.3 ರ ನೂತನ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಪ್ರಜಾ ಸೌಧ ಕಟ್ಟಡದ ಮೊತ್ತ ಸೇರಿ ಒಟ್ಟಾರೆ ಅಂದಾಜು ಸುಮಾರು ರೂ. 9.91 ಕೋಟಿ ರೂ.ಗಳ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ತಾಲೂಕಾಡಳಿತದ ಕಚೇರಿಗಳಿರುವ ಪ್ರಜಾಸೌಧ ಕಟ್ಟಡವನ್ನು ಪಟ್ಟಣದ ಹೊರಭಾಗದಲ್ಲಿ ನಿರ್ಮಿಸಲಾಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಅಳ್ನಾವರ ಪಟ್ಟಣ ಬೆಳದಂತೆ ಅದು ಕೇಂದ್ರಸ್ಥಾನವಾಗುತ್ತದೆ. ಪ್ರಜಾಸೌಧ ನಿರ್ಮಾಣಕ್ಕಾಗಿ ಯಾವುದೇ ರೈತರ ಅಥವಾ ಇತರರ ಜಮೀನು ಪಡೆಯದೇ ಲಭ್ಯವಿರುವ ಸರ್ಕಾರಿ ಭೂಮಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಇದು ಸಾರ್ವಜನಿಕರಿಗೆ ಅನುಕೂಲಕರವಾದ ಸ್ಥಳದಲ್ಲಿದೆ. ಯಾವುದೇ ಸಂಚಾರ ದಟ್ಟಣೆ ಹಾಗೂ ಜನದಟ್ಟಣೆ ಆಗದಂತೆ ಮುಂದಾಲೋಚನೆ ಮಾಡಿ, ಕ್ರಮವಹಿಸಲಾಗಿದೆ ಎಂದು ಸಚಿವರು ಹೇಳಿದರು.
ಶಾಶ್ವತ ಕುಡಿಯುವ ನೀರು
ಅಳ್ಳಾವರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ರೂ. 71,90 ಕೋಟಿ ವೆಚ್ಚದಲ್ಲಿ, ಒಟ್ಟು 3780 ಮನೆಗಳಿಗೆ 24X7 ನಿರಂತರ ನೀರು ಪೂರೈಕೆ ಮಾಡಲಾಗುತ್ತಿದೆ. 1.50 ಕೋಟಿ ವೆಚ್ಚದಲ್ಲಿ ಕಂಬಾರಗಣವಿ ಸೇತುವೆ ನಿರ್ಮಾಣವಾಗಿದೆ. ಅಳ್ಳಾವರ ತಾಲೂಕಿನಲ್ಲಿ ಕಳೆದ ಎರಡು ವರ್ಷದಲಿ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನದಿಂದ ಫಲಾನುಭವಿಗಳಿಗೆ ರೂ. 92.73 ಕೋಟಿ ಸಹಾಯ ಧನ ಸಂದಾಯವಾಗಿರುತ್ತದೆ ಎಂದು ಸಚಿವರು ಹೇಳಿದರು.
ಅಳ್ಳಾವರ ಪಟ್ಟಣದಲ್ಲಿರುವ 6 ಬೆಡ್ ಸಾಮರ್ಥ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಬೆಡ್‍ಗಳ ಸಮುದಾಯ ಆರೋಗ್ಯ ಕೇಂದ್ರ ಅಂತಾ ಉನ್ನತೀಕರಿಸಿ, ಸರ್ಕಾರವು 2025 ನೇ ಸಾಲಿನ ಆಯುವ್ಯದಲ್ಲಿ ಮಂಜೂರು ಮಾಡಿದೆ ಎಂದು ತಿಳಿಸಿದರು.
ಅಳ್ಳಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಯ ಕಾಲುವೆ, ಟೇಲ್ ಚನಲ್, ದುರಸ್ತಿ ಮತ್ತು ಪುನರುಜ್ಜೀವನ ಕಾಮಗಾರಿಗೆ ರೂ. ರೂ. 6.00 ಕೋಟಿ ಅನುದಾನ ಬಿಡುಗಡೆ ಆಗಿದೆ. ಈಗಾಗಲೇ ಶೇ. 80 ರಷ್ಟು ಕಾಮಗಾರಿ ಕಾರ್ಯ ಪೂರ್ಣಗೊಂಡಿದೆ. ಈ ಯೋಜನೆಯಿಂದ ಅಳ್ನಾವರ ತಾಲೂಕಿನ 1240 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯವಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ
ಇಂದಿನ ಸಮಾರಂಭದಲ್ಲಿ ತಾಲೂಕಿನ ಸಿದ್ದಾಪೂರ ಹೋಸ ಕಂದಾಯ ಗ್ರಾಮದ 57 ಜನ ಫಲಾನುಭವಿಗಳಿಗೆ, ಅಂಬೋಳ್ಳಿ (ಕೃಷ್ಣಗಿರಿ) ಉಪಕಂದಾಯ ಗ್ರಾಮದ 25 ಜನ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಸಚಿವರು ವಿತರಿಸಿದರು. ಹಾಗೂ ಡೋರಿ ಗ್ರಾಮದ ದರಖಾಸ್ತ ಪೋಡಿ ಪ್ರಕಾರ ದುರಸ್ತಿ ಮಾಡಿದ 45 ಜನರಿಗೆ ಪಹಣಿ ಪತ್ರಿಕೆಗಳನ್ನು ಅವರು ನೀಡಿದರು. ಕಂದಾಯ ಇಲಾಖೆಯಿಂದ 10 ಜನ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಶಾಸನ ಮಂಜೂರಾತಿ ಪತ್ರ ನೀಡಲಾಯಿತು. ಶಿಕ್ಷಣ ಇಲಾಖೆಯಿಂದ ವಿವಿಧ ಶಾಲೆಗಳ ಸುಮಾರು 25 ಜನ ಶಾಲಾ ಮಕ್ಕಳಿಗೆ ಸಾಂಕೇತೀಕವಾಗಿ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಿ, ಶಾಲೆಗಳಲ್ಲಿ ವಿತರಿಸಲು ಸಚಿವರು ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯ ಲಕ್ಷ್ಮೀ ಯೋಜನೆ ಬಾಂಡ ಅವಧಿ ಮುಗಿದ 125 ಜನ ಫಲಾನುಭವಿಗಳಿಗೆ ಸಹಾಧನ ಸಂದಾಯದ ಪ್ರಮಾಣಪತ್ರಗಳನ್ನು ಹಾಗೂ 26 ಜನ ಫಲಾನುಭವಿಗಳಿಗೆ ಅಡುಗೆ ಗ್ಯಾಸ್ ಸ್ಟೌಗಳನ್ನು ವಿತರಿಸಿದರು.
ಕೃಷಿ ಇಲಾಖೆಯಿಂದ ಸಾಂಕೇತಿಕವಾಗಿ 30 ಜನ ರೈತರಿಗೆ ಬಿತ್ತನೆ ಬೀಜ ಹಾಗೂ ಪಿವ್ಹಿಸಿ ಪೈಪ್, ಸ್ಪಿಂಕ್ಲರ್ ವಿತರಣೆ ಸೌಲಭ್ಯಗಳನ್ನು ಮತ್ತು ತೋಟಗಾರಿಕೆ ಇಲಾಖೆಯಿಂದ 10 ಜನ ರೈತರಿಗೆ ಸ್ಪಿಂಕ್ಲರ್ ಸೆಟ್ ವಿತರಣೆ ಮತ್ತು ಪಶು ಸಂಗೋಪನೆ ಇಲಾಖೆಯಿಂದ ಮೈತ್ರಿ ಯೋಜನೆಯಡಿ ತರಬೇತಿ ಪಡೆದ 10 ಜನ ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು. ಕಂದಾಯ ಇಲಾಖೆಯಿಂದ 03 ಜನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ ಟಾಪ್ ವಿತರಣೆ ಮಾಡಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಎಂ. ಬ್ಯಾಕೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಅಳ್ನಾವರ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಕೃಷಿ ಇಲಾಖೆ ಉಪ ನಿರ್ದೇಶಕಿ ಜಯಶ್ರೀ ಹಿರೇಮಠ, ಸಹಾಯಕ ಕೃಷಿ ನಿರ್ದೇಶಕ ಅನಗೌಡರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ ಚಂಗಾಪುರಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಶಿರಸ್ತೇದಾರ ಮನೋಹರ ಪತ್ತಾರ, ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.