Political News: ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆಯನ್ನು ಕೂಡಲೇ ನಿಲ್ಲಿಸಿ, ಹೋರಾಟಕ್ಕಿಳಿದ ರೈತರು, ಸಾರ್ವಜನಿಕರು, ಮಠಾಧೀಶರುಗಳ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಆಗ್ರಹಿಸಿದ್ದಾರೆ.
ಈ ಯೋಜನೆಯಿಂದ ತುಮಕೂರಿನ ರೈತರಿಗೆ ಅನ್ಯಾಯವಾಗುತ್ತಿದೆ..
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗೆ ಅನ್ಯಾಯ ಆಗುತ್ತಿದ್ದು, ತಕ್ಷಣವೇ ಈ ಯೋಜನೆಯ ಕಾಮಗಾರಿಯನ್ನು ನಿಲ್ಲಿಸುವಂತೆ ಸಾಕಷ್ಟು ಭಾರಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರೂ, ಅವರು ಈ ಬಗ್ಗೆ ಗಮನಹರಿಸದಿರುವುದು ಹಾಗೂ ಈ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ರೈತರು, ಸಾರ್ವಜನಿಕರು, ಮಠಾಧೀಶರುಗಳ ಮೇಲೆ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ವಿಷಾದನೀಯ ಸಂಗತಿ ಎಂದು ಹೇಳಿದ್ದಾರೆ.
ಸಂಸದ ಮಂಜುನಾಥ್ ಸಹ ಇದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ..
ಈ ಸಂಬಂಧ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ ಅವರು ಸಹ ಪ್ರಸ್ತುತ ಬೆಳವಣಿಗೆಯ ಬಗ್ಗೆ ದೂರವಾಣಿ ಮುಖಾಂತರ ಚರ್ಚಿಸಿದ್ದು, ಅತ್ಯಂತ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಿ..
ಆದರೂ ಸಹ ಈ ಭಾಗದ ಜನರ ಹಿತದೃಷ್ಟಿಯಿಂದ ಹಾಗೂ ರೈತರ ಜೀವನಾಡಿ ನೀರಿಲ್ಲದೇ ಬದುಕು ಇಲ್ಲ ಎಂಬುದರ ಸಾಧಕ ಬಾಧಕಗಳ ಬಗ್ಗೆ ರೈತರ, ಮಠಾಧೀಶರ ಹಾಗೂ ಜನಸಾಮಾನ್ಯರ ಮೇಲಿನ ದೌರ್ಜನ್ಯ ನಿವಾರಣೆಗೊಳಿಸಲು ಮತ್ತು ವಿವಾದಿತ ಯೋಜನೆಯ ನಿಜವಾದ ತಾಂತ್ರಿಕ ಅಂಶಗಳ ಮೇಲೆ ಚರ್ಚಿಸಲು ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಉಪಸ್ಥಿತಿಯಲ್ಲಿ ತಕ್ಷಣ ಏರ್ಪಡಿಸುವಂತೆ ಒತ್ತಾಯಿಸಿದ್ದಾರೆ.
ಈ ಸಭೆಗೆ ತಾಂತ್ರಿಕ ತಜ್ಞರನ್ನು ಮತ್ತು ಈ ಹಿಂದೆ ಯೋಜನೆಯ ಕಾರ್ಯಸಾಧ್ಯತೆ ಇಲ್ಲವೆಂದು ಈಗ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಒಪ್ಪಿಗೆ ನೀಡಿರುವ ಅಧಿಕಾರಿಗಳನ್ನು ಸಹ ಈ ಸಭೆಯಲ್ಲಿ ಹಾಜರಿರುವಂತೆ ಸೋಮಣ್ಣ ಅವರು ಮನವಿ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಪಾದಕ್ಕೆ ನಮಸ್ಕಾರ ಮಾಡ್ತೀನಿ..
ಇನ್ನೂ ಇದಕ್ಕೂ ಮುನ್ನ ಮಾತನಾಡಿದ್ದ ಸಚಿವ ಸೋಮಣ್ಣ, ಡಿ.ಕೆ ಶಿವಕುಮಾರ್ ಪಾದಕ್ಕೆ ಕೋಟಿ ನಮಸ್ಕಾರ ಮಾಡ್ತೀನಿ, ಹೇಮಾವತಿ ಕೈ ಬಿಡಿ ಎಂದು ಕೇಳಿಕೊಂಡಿದ್ದರು. ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಯಾಕೆ ಹೀಗಾದರೋ ಗೊತ್ತಿಲ್ಲ. ರಾಜಕೀಯನೇ ಬೇರೆ, ವಿಶ್ವಾಸನೇ ಬೇರೆ. ಯಾಕೆ ಹೇಮಾವತಿ ಹಿಂದೆ ಬಿದ್ದಿದ್ದಾರೆ ಗೊತ್ತಿಲ್ಲ. ತುಮಕೂರಿನ ಜನ ಬಹಳ ಮುಗ್ಧರಿದ್ದಾರೆ. ನಾನು ಯಾವುದೋ ಊರಿನಿಂದ ಬಂದವನಿಗೆ ವೋಟ್ ಹಾಕಿದ್ದಾರೆ. ನನಗೋಸ್ಕರನಾದರೂ ಆ ಯೋಜನೆ ಕೈ ಬಿಡಿ ಎಂದು ಡಿಕೆಶಿಗೆ ಮನವಿ ಮಾಡುತ್ತೇನೆ ಎಂದಿದ್ದರು.
ಇಪ್ಪತ್ತು ವರ್ಷದ ಹಿಂದೆ ಮಾಡಿದ ಈ ಯೋಜನೆಯಿಂದ ಜನ ನೆಮ್ಮದಿಯಾಗಿದ್ದಾರೆ. ಜನರನ್ನ ನೆಮ್ಮದಿಯಿಂದ ಇರಲು ಬಿಡಿ. 5 ತಾಲೂಕಿನವರು ಒಳ್ಳೆಯ ಜೀವನ ಮಾಡುತ್ತಿದ್ದಾರೆ. ನೀವ್ಯಾಕೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದೀರಿ. ತಿಪ್ಪಗೊಂಡನಹಳ್ಳಿ, ಮಂಚನಬೇಲೆ ಸೇರಿದಂತೆ ಬೇರೆ ಯೋಜನೆಗಳು ನೀವೇ ಮಾಡಿ. ನೀವೇ ಮಹಾರಾಜ, ನೀವೇ ಉಪಮುಖ್ಯಮಂತ್ರಿ ಎಂದು ಹೇಳುವ ಮೂಲಕ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಹೇಮಾವತಿ ಲಿಂಕ್ ಕೆನಾಲ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆಲ್ಲದೆ ಇದೀಗ ಈ ವಿಚಾರವಾಗಿ ಖುದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಆದರೆ ಇನ್ನೊಂದೆಡೆ ನಿನ್ನೆಯಷ್ಟೇ ಈ ಹೇಮಾವತಿ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, ಹೋರಾಟಗಾರರ ಬ್ಲ್ಯಾಕ್ ಮೇಲ್ ತಂತ್ರದ ಕುರಿತು ಎಲ್ಲವನ್ನು ಬಿಚ್ಚಿಡ್ತೀನಿ ಎಂದಿದ್ದರು. ಇದಾದ ಬಳಿಕ ಸೋಮಣ್ಣ ಪತ್ರ ಬರೆದಿರುವುದು ತೀವ್ರ ಕುತೂಹಲ ಮೂಡಿಸಿದೆ.