Dharwad News: ಕೀಟಬಾಧೆಯಿಂದ 6 ಎಕರೆ ಹೆಸರು ಬೆಳೆ ಹಾಳು: ಬೇಸರದಿಂದ ಬೆಳೆ ನಾಶಪಡಿಸಿದ ರೈತರು

Dharwad News: ರೈತನಿಗೆ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಿದೆ. ಒಂದೆಡೆ ಮಳೆ, ಮತ್ತೊಂದೆಡೆ ಕೀಟಬಾಧೆ… ಉತ್ತಮ ಆದಾಯದ ನಿರೀಕ್ಷೆಯಲ್ಲಿ ಬೆಳೆದಿದ್ದ ಹೆಸರು ಬೆಳೆ ಕೀಟಬಾಧೆಯಿಂದ ಸಂಪೂರ್ಣ ಹಾಳಾಗಿದೆ. ಕೊನೆಗೆ ಬೇರೆ ದಾರಿ ಕಾಣದೆ ರೈತನೇ ತನ್ನ ಕೈಯಾರೆ 6 ಎಕರೆ ಹೆಸರು ಬೆಳೆಯನ್ನು ನಾಶಪಡಿಸಿರುವ ಮನಕಲಕುವ ಘಟನೆ ಕುಂದಗೋಳದಲ್ಲಿ ನಡೆದಿದೆ.

ಇದು ಕುಂದಗೋಳದ ರೈತ ಶಂಕ್ರಪ್ಪ ಸಿದ್ದಪ್ಪ ಶಿರಗುಪ್ಪಿ ಅವರ ಸಂಕಷ್ಟದ ಕಥೆ. ತಮ್ಮ 6 ಎಕರೆ ಜಮೀನಿನಲ್ಲಿ ಹೆಸರು ಬೆಳೆ ಬಿತ್ತಿದ್ದ ಶಂಕ್ರಪ್ಪ, ಉತ್ತಮ ಮಳೆ ಬಂದರೆ ಉತ್ತಮ ಇಳುವರಿ ಪಡೆದು ಸುಮಾರು 2 ಲಕ್ಷ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದ್ರೆ ರೈತನ ನಿರೀಕ್ಷೆಗೆ ಕೀಟಬಾಧೆ ದೊಡ್ಡ ಹೊಡೆತ ನೀಡಿದೆ.

ಹೆಸರು ಬೆಳೆಗೆ ಕೀಟಬಾಧೆ ಕಾಣಿಸಿಕೊಂಡು ದಿನದಿಂದ ದಿನಕ್ಕೆ ಬೆಳೆ ಹಾಳಾಗತೊಡಗಿದೆ. ಬೆಳೆ ಉಳಿಸಿಕೊಳ್ಳುವ ಉದ್ದೇಶದಿಂದ ರೈತರು ಮೂರ್ನಾಲ್ಕು ಬಾರಿ ಕೀಟನಾಶಕ ಸಿಂಪಡಣೆ ಮಾಡಿದ್ದಾರೆ. ಆದ್ರೆ ಕೀಟಬಾಧೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಪರಿಣಾಮ, ಕಣ್ಣೆದುರೇ ಬೆಳೆ ನಾಶವಾಗುತ್ತಿರುವುದನ್ನು ಕಂಡ ರೈತ, ಕೊನೆಗೆ ತಾವು ಬೆಳೆದ ಬೆಳೆಯನ್ನೇ ನಾಶಪಡಿಸುವ ನಿರ್ಧಾರಕ್ಕೆ ಬಂದಿದ್ದಾರೆ.

6 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೆಸರು ಬೆಳೆ… ತಿಂಗಳುಗಳ ಕಾಲ ಮಾಡಿದ ಶ್ರಮ… ಹಾಕಿದ ಹಣ… ಎಲ್ಲವೂ ಕೀಟಬಾಧೆಗೆ ಆಹುತಿಯಾಗಿದೆ. ಸುಮಾರು 2 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೀಟಬಾಧೆಯಿಂದ ಸಂಪೂರ್ಣ ಬೆಳೆ ಹಾಳಾಗಿರುವುದು ರೈತ ಸಮುದಾಯದಲ್ಲೂ ಆತಂಕ ಮೂಡಿಸಿದೆ.

ಇನ್ನೂ ಈ ಭಾಗದಲ್ಲಿ ಕೀಟಬಾಧೆಯಿಂದ ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ? ರೈತರು ಯಾವೆಲ್ಲ ಕ್ರಮ ಕೈಗೊಂಡಿದ್ದಾರೆ? ಎಂಬುದರ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಹಾನಿಗೊಳಗಾದ ಬೆಳೆಗಳ ನಿಖರ ಸಮೀಕ್ಷೆ ನಡೆಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಒಂದೆಡೆ ಪ್ರಕೃತಿಯ ಹೊಡೆತ… ಮತ್ತೊಂದೆಡೆ ಕೀಟಬಾಧೆ… ಇವೆಲ್ಲದರ ನಡುವೆ ರೈತ ತನ್ನ ಬೆಳೆ ಉಳಿಸಿಕೊಳ್ಳಲು ಹೋರಾಡುವ ಪರಿಸ್ಥಿತಿ. ಕೊನೆಗೆ ಲಕ್ಷಾಂತರ ರೂಪಾಯಿ ಆದಾಯದ ಕನಸು ಕಂಡಿದ್ದ ರೈತನೇ ತನ್ನ ಬೆಳೆಯನ್ನು ನಾಶಪಡಿಸಿರುವುದು ಅನ್ನದಾತನ ಸಂಕಷ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಸರ್ಕಾರ ಹಾಗೂ ಕೃಷಿ ಇಲಾಖೆ ರೈತರ ನೆರವಿಗೆ ಯಾವಾಗ ಧಾವಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

-ಕ್ಯಾಮರಾ ಮ್ಯಾನ್ ಹೇಮಂತ್ ಕುಮಾರ್ ಜೊತೆ ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ..*

About The Author