Hubli News: ಹುಬ್ಬಳ್ಳಿ ಕಿಮ್ಸ್‌ನ ಅಧ್ಯಯನ: ಮಕ್ಕಳಲ್ಲೂ ಹೃದಯಾಘಾತದ ಆತಂಕ

Hubli News: ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚುತ್ತಿರುವ ಬಗ್ಗೆ ಹುಬ್ಬಳ್ಳಿ ಕಿಮ್ಸ್‌ನ ಅಧ್ಯಯನ ಇದೀಗ ಗಮನ ಸೆಳೆಯುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಮಕ್ಕಳಲ್ಲಿ ಹೃದಯಾಘಾತಕ್ಕೆ ಪೂರಕವಾಗುವ ಅಂಶಗಳ ಕುರಿತು ಈ ರೀತಿಯ ಅಧ್ಯಯನ ನಡೆಸಲಾಗಿದೆ. ನೋಡಲ್ ಅಧಿಕಾರಿ ಡಾ. ರಾಮ್ ಕವಲಗುಡ್ಡ ನೇತೃತ್ವದಲ್ಲಿ ಅಧ್ಯಯನ ನಡೆದಿದ್ದು, ಕರ್ನಾಟಕ ಸೇರಿದಂತೆ ದೇಶದ 13 ರಾಜ್ಯಗಳ 347 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಧಾರವಾಡ ಜಿಲ್ಲೆಯ 62 ಕಾಲೇಜು ವಿದ್ಯಾರ್ಥಿಗಳನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿದೆ. 8ರಿಂದ 18 ವರ್ಷದೊಳಗಿನ ಹೆಚ್ಚು ತೂಕ ಹೊಂದಿರುವ ಮಕ್ಕಳನ್ನು ಆಯ್ಕೆ ಮಾಡಿಕೊಂಡು, ಅವರ ಎತ್ತರ, ತೂಕ, ರಕ್ತದಲ್ಲಿನ ಕೊಲೆಸ್ಟರಾಲ್ ಸೇರಿದಂತೆ ಹಲವು ಆರೋಗ್ಯ ಮಾನದಂಡಗಳನ್ನು ಪರೀಕ್ಷಿಸಲಾಗಿದೆ. ಜೊತೆಗೆ ಹೃದಯದಲ್ಲಿನ ಅಪಧಮನಿಯ ಎಂಡೋಥೀಲಿಯಂ ಸ್ಥಿತಿಯನ್ನೂ ಪರೀಕ್ಷೆ ಮಾಡಲಾಗಿದೆ.

ಅಧ್ಯಯನದ ವೇಳೆ ಪರೀಕ್ಷೆಗೆ ಒಳಪಟ್ಟ ಮಕ್ಕಳಲ್ಲಿ ಸುಮಾರು 70ರಷ್ಟು ಮಕ್ಕಳಲ್ಲಿ ಹೃದಯಾಘಾತಕ್ಕೆ ಪೂರಕವಾಗಿರುವ ಅಂಶಗಳು ಕಂಡುಬಂದಿವೆ ಎನ್ನಲಾಗಿದೆ. ಇನ್ನೂ ಶೇಕಡಾ 17ರಷ್ಟು ಮಕ್ಕಳಲ್ಲಿ ಎಂಡೋಥೀಲಿಯಂ ಡ್ಯಾಮೇಜ್ ಆಗಿರುವುದು ಪತ್ತೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಹೃದಯ ಮಾತ್ರವಲ್ಲದೆ ಕಿಡ್ನಿ ಸೇರಿದಂತೆ ದೇಹದ ಹಲವು ಅಂಗಗಳ ಮೇಲೂ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ.

ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದಿನ 10ರಿಂದ 15 ವರ್ಷಗಳಲ್ಲಿ ಹೃದಯ ಸಂಬಂಧಿ ಹಾಗೂ ಕಿಡ್ನಿ ಸಮಸ್ಯೆಗಳ ಅಪಾಯ ಎದುರಾಗಬಹುದು ಎಂಬ ಆತಂಕವನ್ನು ಅಧ್ಯಯನ ವರದಿ ಮುಂದಿಟ್ಟಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜುತನ, ದೈಹಿಕ ಚಟುವಟಿಕೆ ಕೊರತೆ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಜಂಕ್ ಫುಡ್‌ಗೆ ಮಕ್ಕಳ ಅತಿಯಾದ ಅವಲಂಬನೆ, ಕೂಲ್ ಡ್ರಿಂಕ್ಸ್, ಹೆಚ್ಚು ಸಕ್ಕರೆ ಹಾಗೂ ಉಪ್ಪು ಇರುವ ಆಹಾರ ಸೇವನೆ ಕೂಡ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮೊಬೈಲ್, ಟಿವಿ ಮುಂದೆ ಹೆಚ್ಚು ಸಮಯ ಕಳೆಯುವ ಬದಲು ಮಕ್ಕಳನ್ನು ಆಟ, ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಯತ್ತ ಪೋಷಕರು ಪ್ರೋತ್ಸಾಹಿಸುವ ಅಗತ್ಯವಿದೆ.

ಮಕ್ಕಳ ಆಹಾರ ಪದ್ಧತಿಯಲ್ಲೂ ಬದಲಾವಣೆ ಅಗತ್ಯ. ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡುವುದರ ಜೊತೆಗೆ ಜಂಕ್ ಫುಡ್ ಹಾಗೂ ಹೆಚ್ಚು ಸಕ್ಕರೆ, ಉಪ್ಪು ಹೊಂದಿರುವ ಆಹಾರವನ್ನು ನಿಯಂತ್ರಿಸಬೇಕಿದೆ. ಬಾಲ್ಯದಲ್ಲೇ ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡರೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗಲಿದೆ.

ಮಕ್ಕಳ ಆರೋಗ್ಯದ ಕುರಿತು ಕಿಮ್ಸ್ ನಡೆಸಿರುವ ಈ ಅಧ್ಯಯನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೂ ತರಲು ಸಿದ್ಧತೆ ನಡೆದಿದೆ. ಮಕ್ಕಳಲ್ಲಿ ಹೃದಯ ಸಂಬಂಧಿ ಅಪಾಯದ ಅಂಶಗಳು ಕಂಡುಬರುತ್ತಿರುವುದು ಪೋಷಕರಿಗೂ ಎಚ್ಚರಿಕೆಯ ಸಂದೇಶವಾಗಿದೆ.

ಮಕ್ಕಳ ಆರೋಗ್ಯ ಕಾಪಾಡಲು ಈಗಲೇ ಆಹಾರ ಪದ್ಧತಿ ಬದಲಿಸಿ… ದೈಹಿಕ ಚಟುವಟಿಕೆ ಹೆಚ್ಚಿಸಿ… ಆರೋಗ್ಯಕರ ಜೀವನಶೈಲಿಯತ್ತ ಮಕ್ಕಳನ್ನು ಕೊಂಡೊಯ್ಯಬೇಕಿದೆ.

ಕ್ಯಾಮೆರಾ ಮ್ಯಾನ್ ಹೇಮಂತ್ ಕುಮಾರ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author