ಬದಲಾಗಿರುವುದು ಕಾಲ ಮಾತ್ರ, ಕಾಂಗ್ರೆಸ್‌ನ ಸರ್ವಾಧಿಕಾರದ ಚಾಳಿ ಮಾತ್ರ ಬದಲಾಗಿಲ್ಲ: ತೇಜಸ್ವಿ ಸೂರ್ಯ

Political News: ಸಂಸದ ತೇಜಸ್ವಿ ಸೂರ್ಯ ಸಿಎಂ ಡಿಕೆಶಿ ನೀಡಿದ ನೋಟೀಸ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಚಿತ್ರಾ ಸಿನಿಮಾ ಆ್ಯಂಡ್ ಕಲ್ಚರಲ್ ಅಕಾಡೆಮಿಯಲ್ಲಿ ಗಾಂಧೀಜಿ ಹತ್ಯೆಯ ಸತ್ಯ ನಾಟಕ ನಡೆದಿತ್ತು. ಆದರೆ ಸರ್ಕಾರ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ, ಈ ನಾಟಕ ಪ್ರದರ್ಶನವನ್ನು ಸೂಚಿಸುವವರೆಗೂ ಮುಂದೂಡಬೇಕೆಂದು ಹೇಳಿದೆ. ಅಲ್ಲದೇ ಈ ನಾಟಕ ಮತ್ತೆ ಪ್ರಸ್ತುತ ಪಡಿಸಿದ್ದಲ್ಲಿ, ಕಾನೂನು ಕ್ರಮ ಕೈಗ“ಳ್ಳುವುದಾಗಿ ಎಚ್ಚರಿಸಿದ್ದಾರೆ.

ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ !! ಅಭಿವ್ಯಕ್ತಿ ಸ್ವಾತಂತ್ರ್ಯ ನಿಮ್ಮ ಸರ್ಕಾರ ನೀಡುವ ಭಿಕ್ಷೆಯಲ್ಲ, ಅದು ಸಂವಿಧಾನ ನೀಡಿರುವ ಹಕ್ಕು. 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದರು. ಇಂದು ಕರ್ನಾಟಕದಲ್ಲಿ ಅದೇ ಕಾಂಗ್ರೆಸ್, ಅದೇ ಸರ್ವಾಧಿಕಾರದ ಮನಸ್ಥಿತಿಯೊಂದಿಗೆ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದೆಯೇ? ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.

ಅಂದು ತುರ್ತು ಪರಿಸ್ಥಿತಿ, ಇಂದು ಅಘೋಷಿತ ತುರ್ತು ಪರಿಸ್ಥಿತಿ! ಅಂದು ಪತ್ರಿಕೆಗಳಿಗೆ ನಿರ್ಬಂಧ, ಇಂದು ಕಲಾವಿದರ ಅಭಿವ್ಯಕ್ತಿಗೆ ಅಡ್ಡಿ! ಬದಲಾಗಿರುವುದು ಕಾಲ ಮಾತ್ರ, ಕಾಂಗ್ರೆಸ್‌ನ ಸರ್ವಾಧಿಕಾರದ ಚಾಳಿ ಮಾತ್ರ ಬದಲಾಗಿಲ್ಲ. ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ಮೇಲೆ ಹಲ್ಲೆ ನಡೆಸಿ, ಮಸಿ ಬಳಿದ ದುಷ್ಕರ್ಮಿಗಳಿಗೆ ಕುಮ್ಮಕ್ಕು ನೀಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಯಾವ ನ್ಯಾಯ ?

ವಿಚಾರವನ್ನು ಎದುರಿಸಲಾಗದವರು, ಪ್ರಶ್ನೆಗಳಿಗೆ ಉತ್ತರಿಸಲಾಗದವರು ಪೊಲೀಸ್ ಅಧಿಕಾರದ ಹಿಂದೆ ಅಡಗುತ್ತಾರೆ, ಸತ್ಯವನ್ನು ಸಹಿಸಲಾಗದವರು ನಿಷೇಧದ ಅಸ್ತ್ರ ಪ್ರಯೋಗಿಸುತ್ತಾರೆ. ಪೊಲೀಸ್ ಇಲಾಖೆ ನಿಮ್ಮ ರಾಜಕೀಯ ಪ್ರತಿಷ್ಠೆ ಕಾಪಾಡುವ ಕವಚವಲ್ಲ, ಅದು ಕಾನೂನು ಮತ್ತು ನ್ಯಾಯವನ್ನು ರಕ್ಷಿಸುವ ವ್ಯವಸ್ಥೆ ಎಂದು ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ, ಸಂವಿಧಾನ ರಾಹುಲ್ ಗಾಂಧಿಯವರ ಅಣತಿಯಂತೆ ನಡೆಯುವುದಿಲ್ಲ. ಪೊಲೀಸ್ ಇಲಾಖೆ ನಿಮ್ಮ ಪಕ್ಷದ ಖಾಸಗಿ ಸೇನೆಯೂ ಅಲ್ಲ. ಸಂವಿಧಾನದ ಮೇಲೆ ಸವಾರಿ ಮಾಡುತ್ತಿರುವ ಕಾಂಗ್ರೆಸ್ ನ ದುರಹಂಕಾರಕ್ಕೆ ಜನರೇ ಅಂತಿಮ ಪೂರ್ಣವಿರಾಮ ಇಡಲಿದ್ದಾರೆ ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ..

About The Author