Political News: ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಮ್‌ರಿಗೆ ಶೇ.4 ರಷ್ಟು ಮೀಸಲಾತಿ ನೀಡುವುದರ ಜೊತೆಗೆ ಗುತ್ತಿಗೆಯಲ್ಲೂ ಶೇ.20 ರಷ್ಟು ಮೀಸಲಾತಿ ನೀಡಿರುವ ನಡೆ ವಿರುದ್ಧ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಧಾರವಾಡದ ಕೋರ್ಟ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕೆಲ ಹೊತ್ತು ಕೋರ್ಟ್ ವೃತ್ತವನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಬಂದ್ ಮಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಧಿಕ್ಕಾರ ಕೂಗಿದರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವುದು ಮುಸ್ಲಿಮರ ಸರ್ಕಾರ, ಸಿಎಂ ಸಿದ್ದರಾಮಯ್ಯನವರು ಮುಸ್ಲಿಮರನ್ನು ಓಲೈಸುವುದಕ್ಕೋಸ್ಕರ ಸರ್ಕಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಅಸಮಧಾನ ಹೊರಹಾಕಿದರು. ಈ ವೇಳೆ ಸಿಎಂ ಸಿದ್ದರಾಮಯ್ಯನವರ ಪ್ರತಿಕೃತಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಲು ಮುಂದಾದರು. ಆದರೆ, ಪೊಲೀಸರು ಬೆಂಕಿ ಹಚ್ಚದಂತೆ ಪ್ರತಿಕೃತಿ ಮೇಲೆ ನೀರು ಹಾಕಲು ಯತ್ನಿಸಿದಾಗ, ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ಕೋರ್ಟ್ ವೃತ್ತವನ್ನು ಬಂದ್ ಮಾಡಿದ್ದರಿಂದ ಸಂಚಾರ ದಟ್ಟನೆ ಉಂಟಾಗಿತ್ತು.
ಪ್ರತಿಕೃತಿ ದಹನ ಮಾಡಲು ಅವಕಾಶ ಕೊಡದ ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರು ಜಟಾಪಟಿ ನಡೆಸಿದ ಪ್ರಸಂಗ ನಡೆಯಿತು. ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ. ಅದಕ್ಕಾಗಿ ಯಾವ ಮಟ್ಟಕಾದರು ಹೋಗುತ್ತಿದೆ. ಈ ಕೂಡಲೇ ಮೀಸಲಾತಿ ರದ್ದು ಮಾಡಿ ಜನ ಕಲ್ಯಾಣ ಆಡಳಿತ ನೀಡಲಿ ಎಂದು ಆಗ್ರಹಿಸಿದರು.