Dharwad News: ಕುಂದಗೋಳ ಪಂಚಗ್ರಹ ಹಿರೇಮಠದ ಆಸ್ತಿಯನ್ನು ಉಳಿಸುವಂತೆ ಭಕ್ತರ ಆಗ್ರಹ

Dharwad News: ಧಾರವಾಡ: ಕುಂದಗೋಳ ಪಂಚಗ್ರಹ ಹಿರೇಮಠದ ಆಸ್ತಿಯನ್ನು ಅಕ್ರಮವಾಗಿ ಮಠದ ಸ್ವಾಮೀಜಿ ಮಾರಾಟ ಮಾಡಲು ಮುಂದಾಗಿದ್ದು, ಈ ಕೂಡಲೇ ಎನ್ಎ ಪರಿವರ್ತನೆಯನ್ನು ರದ್ದುಪಡಿಸಿ ಮಠದ ಆಸ್ತಿಯನ್ನು ಉಳಿಸಿಕೊಡುವಂತೆ ಆಗ್ರಹಿಸಿ ಭಕ್ತರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕುಂದಗೋಳ ಪಂಚಗ್ರಹ ಹಿರೇಮಠದ ನೂರಾರು ಭಕ್ತರು, ಶ್ರೀ ಮಠದ 53 ಎಕರೆ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿಸಿ ಅದನ್ನು ರಿಯಲ್ ಎಸ್ಟೇಟ್‌ದಾರರೊಬ್ಬರಿಗೆ ಮಾರಾಟ ಮಾಡುತ್ತಿದ್ದಾರೆ ಈ ಕೂಡಲೇ ಎನ್.ಎ.ಪರಿವರ್ತನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.

ಪಂಚಗ್ರಹ ಹಿರೇಮಠವು ಶ್ರೀ ಕಾಶಿ ಶಾಖಾ ಮಠವಾಗಿದ್ದು ವಿಜಯಪುರ ಆದಿಲ್ ಶಾಹಿಗಳ ಕಾಲದಲ್ಲಿ 96 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಈ ಭೂಮಿಗಳು ಇಂದಿಗೂ ಮಠದ ಹೆಸರಿನಲ್ಲಿದ್ದು, ಸಾರ್ವಜನಿಕ ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರ ಬಳಕೆಯಾಗಬೇಕಾಗಿದೆ.

ಈ ಆಸ್ತಿಗಳು ಯಾವುದೇ ವ್ಯಕ್ತಿಯ ಖಾಸಗಿ ಸ್ವತ್ತಾಗಿಲ್ಲ. ಇವುಗಳು ಏಕಪಕ್ಷೀಯವಾಗಿ ಮಾರಾಟ ಅಥವಾ ಹಸ್ತಾಂತರ ಮಾಡಲು ಸಾಧ್ಯವಿಲ್ಲ. ಭಕ್ತರು ಈ ಭೂಮಿಯನ್ನು ಲಾವಣಿಯಾಗಿ ಪಡೆದು ಕೃಷಿ ಮಾಡುತ್ತಾ ಮಠಕ್ಕೆ ಆದಾಯ ಒದಗಿಸುತ್ತಿದ್ದಾರೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಮಠದ ಶ್ರೀ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮಿಗಳು ಕೈಗೆ ಸಿಕ್ಕಂತೆ ಮಾರಾಟ ಮಾಡುತ್ತಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭೂಮಿ, ಬೆಳ್ಳಿ ಮತ್ತು ಬಂಗಾರ ಸೇರಿದಂತೆ ಅನೇಕ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ.ಪ್ರಸ್ತುತ ಉಳಿದಿರುವ ಭೂಮಿಯನ್ನೂ ಸಹ ಎನ್ಎ ಆಗಿ ಪರಿವರ್ತಿಸಿ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಜಿಲ್ಲಾಧಿಕಾರಿಗಳು ಕಳೆದ ಎ.10 ರಂದು ಹೊರಡಿಸಿರುವ ಈ ಕುರಿತಾದ ಆದೇಶವನ್ನು ತಕ್ಷಣ ಹಿಂಪಡೆಯಬೇಕು.ಮಠದ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಇಲ್ಲವಾದಲ್ಲಿ ಭಕ್ತರ ವಿರೋಧ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಠದ ಆಸ್ತಿಯನ್ನು ಉಳಿಸಿಕೊಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಶ್ರೀಮಠದ ಭಕ್ತರು, ಪಟ್ಟಣದ ಪ್ರಮುಖರು ಮನವಿ ಮಾಡಿದರು.

ಸಂಗಮೇಶ್ ಸತ್ತೀಗೇರಿ, ಕರ್ನಾಟಕ ಟಿವಿ, ಧಾರವಾಡ

About The Author