Dharwad News: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡನ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಖಾಸಿಫ್ ಹಾಗೂ ರೆಹಾನ್ ಶರೀಫ್ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡನ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸೆಲ್‌ನಿಂದ ಹೊರಗೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಾಗ್ವಾದದ ವೇಳೆ ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಗಾಯಗೊಂಡ ವಾರ್ಡನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೈಲು ಆಡಳಿತ, ಆರೋಪಿಗಳಿಗೆ ಶಿಸ್ತು ಕ್ರಮವಾಗಿ ಮುಂದಿನ ಒಂದು ತಿಂಗಳ ಕಾಲ ಕುಟುಂಬ ಸದಸ್ಯರ ಭೇಟಿಯನ್ನು ನಿಷೇಧಿಸಿದೆ.
ಇದರಿಂದ ಕೈದಿಗಳನ್ನು ಭೇಟಿಯಾಗಲು ಶಿವಮೊಗ್ಗದಿಂದ ಬಂದಿದ್ದ ಕುಟುಂಬಸ್ಥರು ಜೈಲಿನಿಂದ ನಿರಾಸೆಯಿಂದ ವಾಪಸ್ ತೆರಳಿದ್ದಾರೆ.




