Dharwad News: ನೆಮ್ಮದಿ ಹಾಳು ಮಾಡಿದ ಸಾಲದ ಹೊರೆ: ಬರಗಾಲಕ್ಕೆ ಬೇಸತ್ತು ಜೀವ ಬಲಿ ನೀಡಿದ ರೈತ

Dharwad News: ಧಾರವಾಡ ಜಿಲ್ಲೆಯಲ್ಲಿ ಮಳೆ ಅಭಾವ ಹಾಗೂ ಸಾಲದ ಹೊರೆ ಮತ್ತೊಂದು ರೈತ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಬೆಳೆ ಕೈಕೊಟ್ಟ ಹಿನ್ನೆಲೆ, ಹೆಂಡತಿ ಮತ್ತು ಮಗಳ ಬಂಗಾರವನ್ನು ಅಡವಿಟ್ಟು ಬಿತ್ತನೆ ಮಾಡಿದ್ದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಕಬ್ಬೇನೂರ ಗ್ರಾಮದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕಬ್ಬೇನೂರ ಗ್ರಾಮದ 45 ವರ್ಷದ ರೈತ ವೀರುಪಾಕ್ಷಪ್ಪ ನಾಗಮ್ಮನವರ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಆರು ಎಕರೆ ಜಮೀನಿನಲ್ಲಿ ಹೆಸರು ಹಾಗೂ ಉದ್ದು ಬೆಳೆ ಬೆಳೆದಿದ್ದ ಅವರು, ಮಳೆ ಕೈಕೊಟ್ಟ ಪರಿಣಾಮ ಬೆಳೆ ಸಂಪೂರ್ಣ ಒಣಗಿಹೋಗಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.

ಬಿತ್ತನೆಗಾಗಿ ಹೆಂಡತಿ ಹಾಗೂ ಮಗಳ ಮೂರು ತೊಲೆ ಬಂಗಾರವನ್ನು ಸ್ನೇಹಿತನ ಹೆಸರಿನಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟು ಎರಡೂವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದರ ಜೊತೆಗೆ ಬೆಳೆ ಸಾಲ, ಕೈಗಡ ಸಾಲ ಸೇರಿದಂತೆ ಸುಮಾರು ಹತ್ತು ಲಕ್ಷ ರೂಪಾಯಿ ಸಾಲದ ಹೊರೆ ಅವರನ್ನು ಕಂಗೆಡಿಸಿತ್ತು.

ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ, ಬಂಗಾರ ಬಿಡಿಸಿಕೊಳ್ಳಲು ಆಗುವುದಿಲ್ಲ ಎಂಬ ಆತಂಕದಲ್ಲಿ ಜಮೀನಿಗೆ ತೆರಳಿ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಸುಮಾರು ಒಂದು ವಾರದ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಗಂಡನ ಭಾವಚಿತ್ರ ಹಿಡಿದು ಕಣ್ಣೀರಿಡುತ್ತಿರುವ ಪತ್ನಿ ಸಾವಕ್ಕ, ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

About The Author