Dharwad News: ಧಾರವಾಡ : ಪೋಕ್ಸೋ ಪ್ರಕರಣದಲ್ಲಿ ಹೊರಗಿದ್ದ ವಿಚಾರಣಾಧೀನ ಕೈದಿಯೋರ್ವ ಕಟ್ಟಡವೇರಿದ ಪ್ರಸಂಗ ನಗರದ ಕುಮಾರೇಶ್ವರ ನಗರದಲ್ಲಿ ನಡೆದಿದೆ. ಜಿಲ್ಲೆಯ ಅಣ್ಣಿಗೇರಿಯ ವಿಜಯ್ ಎಂಬಾತನೇ ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಏರಿದ ಕೈದಿ.
ಭಾನುವಾರ ಧಾರವಾಡ ಜೈಲಿಗೆ ಕಳುಹಿಸಲು ಪೊಲೀಸರು ಆತನನ್ನು ಕರೆತಂದಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋದ ಆರೋಪಿ ವಿಜಯ್ ಬಿಲ್ಡಿಂಗ್ ಏರಿದ್ದಾನೆ. ನಂತರ ಸ್ಥಳಕ್ಕೆ ನ್ಯಾಯಾಧೀಶರು ಹಾಗೂ ಮಾಧ್ಯಮದವರು ಬರುವಂತೆ ಪಟ್ಟು ಹಿಡಿದಿದ್ದ. ಅಲ್ಲಿದ್ದ ಸ್ಥಳೀಯರು ಆತನ ಮನವೊಲಿಸಿ ಕೆಳಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ನಂತರ ಕೆಳಗೆ ಇಳಿದಿದ್ದಾನೆ.
ಆರೋಪಿ ವಿಜಯ್ ಮೂರು ದಿನದ ಹಿಂದೆ ಬಂಧನವಾಗಿದ್ದ. ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಈತನ ಮೇಲೆ ಬಾಡಿ ವಾರೆಂಟ್ ಆಗಿತ್ತು. ಹೀಗಾಗಿ, ಇವತ್ತು ಬಾಡಿ ವಾರೆಂಟ್ ಮೇಲೆ ವಿಜಯ್ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಅಣ್ಣಿಗೇರಿ ಪೊಲೀಸರು ಧಾರವಾಡಕ್ಕೆ ಕರೆ ತಂದಾಗ ಈತ ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಏರಿದ್ದ.
ನನಗೆ ನ್ಯಾಯಬೇಕು ಎಂದು ಹಠ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದ ಈತ ನ್ಯಾಯಾಧೀಶರು ಸ್ಥಳಕ್ಕೆ ಬಂದರೆ ಮಾತ್ರ ನಾನು ಕೆಳಗೆ ಇಳಿಯುತ್ತೇನೆ ಎಂದು ಪಟ್ಟು ಹಿಡಿದಿದ್ದ. ಕೊನೆಗೆ ಬಿಲ್ಡಿಂಗ್ ಪಕ್ಕದಲ್ಲಿ ಇದ್ದ ವಿಶ್ವನಾಥ ಚಿಂತಾಮಣಿ ಎಂಬುವರನ್ನು ಇವರೇ ನ್ಯಾಯಾಧೀಶರು ಎಂದು ಯುವಕನ ಕಡೆ ಕರೆದುಕೊಂಡು ಹೋಗಿ ಕೆಳಗೆ ಇಳಿಸಿದ್ದಾರೆ.
ಈ ಕುರಿತು ಕೈದಿ ವಿಜಯ್ ಮಾತನಾಡಿ, ‘ನಾನೊಬ್ಬ ಡ್ರೈವರ್, ಈ ಹಿಂದೆ ನನ್ನ ಮೇಲೆ ರೇಪ್ ಕೇಸ್ ಹಾಕಿದ್ದರು. ಆ ಕೇಸ್ನಲ್ಲಿ ಎರಡು ವರ್ಷ ಜೈಲಿನಲ್ಲಿದ್ದು, ಹೊರಬಂದೆ. ಊರಿನಲ್ಲಿ ಯಾರೇ ಏನೇ ಕಳ್ಳತನ ಮಾಡಿದ್ರೂ ಮೊದಲು ವಿಜಯ್ ಹೆಸರೇ ಬರುತ್ತೆ. ಪೊಲೀಸರು ಬಂದು ನನ್ನನ್ನ ತಿಂಗಳಾನುಗಟ್ಟಲೆ ಇಟ್ಟುಕೊಂಡು ಹೊಡೆಯುತ್ತಾರೆ. ನನಗೆ ನ್ಯಾಯ ಬೇಕು. ನನ್ನನ್ನು ಹಿಡಿದುಕೊಂಡು ಮೂರು ದಿನ ಆಯ್ತು. ನಿನ್ನೆ ರಾತ್ರಿ ನನ್ನನ್ನ ಸ್ಟೇಷನ್ಗೆ ಕರೆದುಕೊಂಡು ಹೋಗಿ, ಇವತ್ತು ಕೋರ್ಟ್ಗೆ ಕರೆದುಕೊಂಡು ಬಂದಿದ್ದಾರೆ. ನನಗೆ ಬೇಲ್ ಬೇಕು’ ಎಂದಿದ್ದಾನೆ. ಸದ್ಯ ಈತ ಕೆಳಗೆ ಇಳಿದು ಬರುತ್ತಿದ್ದಂತೆಯೇ ಮತ್ತೆ ಪೊಲೀಸರು ತಮ್ಮ ವಶಕ್ಕೆ ಪಡೆದರು.