ಬೆಂಗಳೂರು: ಸದನದಲ್ಲಿ ಅತೃಪ್ತ ಶಾಸಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಸವಾಲ್ ಎಸೆದಿರೋ ಡಿ.ಕೆ ಶಿವಕುಮಾರ್ ಗೆ ಹಣ ಬಲ, ತೋಳ್ಬಲ ಇರಬಹುದು. ಆದರೆ ನಾನೇನು ಬಳೆ ತೊಟ್ಟು ಕುಳಿತಿಲ್ಲ ಅಂತ ಅನರ್ಹಗೊಂಡಿರೋ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಕಾಂಗ್ರೆಸ್-ಜೆಡಿಎಸ್ ನ ಅನರ್ಹ ಶಾಸಕರು ಇದೀಗ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಲು ಶುರುವಿಟ್ಟುಕೊಂಡಿದ್ದಾರೆ. ಅನರ್ಹ ಶಾಸಕರು ನಮಗೆ ಕೈಕೊಟ್ಟು ಬಿಜೆಪಿ ಜೊತೆ ಸೇರಿ ರಾಜೀನಾಮೆ ನೀಡಿದ್ದಾರೆ ಎಂಬ ಕೃಷ್ಣಭೈರೇಗೌಡ ಮತ್ತು ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಭೈರತಿ ಬಸವರಾಜ್, ಕೃಷ್ಣಭೈರೇಗೌಡರು ನಾವೆಲ್ಲಾ ಏನು ತಪ್ಪು ಮಾಡಿದೆವು ಅಂತ ಹೇಳಬೇಕು ಇನ್ನು ಬಿಜೆಪಿ ಸೇರ್ಪಡೆಗೊಳ್ಳೋ ಬಗ್ಗೆ ನಾವ್ಯಾರೂ ತೀರ್ಮಾನ ಮಾಡಿಲ್ಲ ಎಂದರು. ಇನ್ನು ಸದನದಲ್ಲಿ ಅತೃಪ್ತರಿಗೆ ಸವಾಲ್ ಹಾಕಿದ್ದ ಮಾಜಿ ಸಚಿವ ಡಿಕೆಶಿ ಕುರಿತು ಮಾತನಾಡಿದ ಬಸವರಾಜ್, ಅವರ ಬಳಿ ಹಣ ಬಲ ತೋಳ್ಬಲ ಎಲ್ಲಾ ಇರಬಹುದು. ನಾನೂ ಕೂಡ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಕಾರ್ಪೊರೇಟರ್ ಮಟ್ಟದಿಂದ ಚುನಾವಣೆ ಎದುರಿಸಿರುವೆ. ನಾನೂ ಹೋರಾಟದ ಹಿನ್ನೆಲೆಯಿಂದಲೇ ಬಂದಿದ್ದೇನೆ, ಬಳೆ ತೊಟ್ಟು ಬಂದು ಕುಳಿತಿಲ್ಲ ಅಂತ ತಿರುಗೇಟು ನೀಡಿದ ಭೈರತಿ ಬಸವರಾಜ್. ನನ್ನ ಕ್ಷೇತ್ರದ ಜನರೇ ಡಿಕೆಶಿ ಸವಾಲನ್ನು ಸ್ವೀಕರಿಸಲು ರೆಡಿಯಾಗಿದ್ದಾರೆ ಹೀಗಾಗಿ ನಾನು ಕೂಡ ಸವಾಲ್ ಸ್ವೀಕರಿಸಲು ಸಿದ್ಧನಿದ್ದೇನೆ. ಉಪಚುನಾವಣೆ ಎದುರಿಸಲು ನಾನು ಪಕ್ಷೇತರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಲು ನಾನು ತಯಾರಿದ್ದೇನೆ ಅಂತ ಭೈರತಿ ಬಸವರಾಜ್ ಇದೇ ವೇಳೆ ಸ್ಪಷ್ಟ ಪಡಿಸಿದ್ರು.