ಬೆಂಗಳೂರು ನಗರದ ಖಾಸಗಿ ಕ್ಲಿನಿಕ್‌ವೊಂದರಲ್ಲಿ 22 ವರ್ಷದ ಯುವತಿಗೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಆರೋಪದ ಹಿನ್ನೆಲೆಯಲ್ಲಿ 56 ವರ್ಷದ ಚರ್ಮರೋಗ ತಜ್ಞನನ್ನು ಅಶೋಕ್‌ನಗರ ಪೊಲೀಸ್‌ರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಅಡಿ ಲೈಂಗಿಕ ಕಿರುಕುಳ ಮತ್ತು ಸೆಕ್ಷನ್ 79 ಮಹಿಳೆಯ ನಮ್ರತೆಯನ್ನು ಅವಮಾನಿಸಿದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಯುವತಿ ತನ್ನ ತಂದೆಯೊಂದಿಗೆ ವೈದ್ಯನ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಆದರೆ ತಂದೆ ಕ್ಲಿನಿಕ್ ಒಳಗೆ ಹೋಗದೆ ಹೊರಗೇ ನಿಂತಿದ್ದರು. ಈ ವೇಳೆ ವೈದ್ಯರು ಯುವತಿಯನ್ನು ಪರೀಕ್ಷೆ ಮಾಡುವ ನೆಪದಲ್ಲಿ ಅನುಚಿತವಾಗಿ ವರ್ತಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ವೈದ್ಯರು ನಾಜೂಕು ಭಾಗಗಳನ್ನು ತಪಾಸಣೆಯ ಹೆಸರಿನಲ್ಲಿ ಅನವಶ್ಯಕವಾಗಿ ಸ್ಪರ್ಶಿಸಿದ್ದಾನೆ. ಹಲವಾರು ಬಾರಿ ಅವಳನ್ನು ಮುಟ್ಟಿದ್ದು, ಬಲವಂತವಾಗಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಅಲ್ಲದೇ, ಖಾಸಗಿಯಾಗಿ ಹೋಟೆಲ್ ರೂಮ್‌ವೊಂದರಲ್ಲಿ ಭೇಟಿಯಾಗುವಂತೆ ಪೀಡಿಸಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ ಬಳಿಕ ಯುವತಿ ವಿಷಯವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ನಂತರ ಯುವತಿಯ ಕುಟುಂಬದವರು ಹಾಗೂ ಸ್ಥಳೀಯ ನಿವಾಸಿಗಳು ಕ್ಲಿನಿಕ್ ಎದುರು ಪ್ರತಿಭಟಿಸಿದರು. ಈ ಸಂದರ್ಭ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಭಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿತ ವೈದ್ಯರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದು, ನಾನು ಚಿಕಿತ್ಸೆ ನೀಡಿದ ಕ್ರಮವನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ ಎಂಬುದು ಅವರ ವಾದವಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ

