ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೀಪಾವಳಿ ಪ್ರಯುಕ್ತ ದೇಶದ ನಾಗರಿಕರಿಗೆ ಬರೆದ ಪತ್ರದಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಆಪರೇಶನ್ ಸಿಂಧೂರ್ ಸಂದರ್ಭದಲ್ಲಿ ಭಾರತವು ಸದಾಚಾರವನ್ನು ಎತ್ತಿಹಿಡಿದು, ಅನ್ಯಾಯಕ್ಕೆ ಪ್ರತೀಕಾರ ತೀರಿಸಿತು ಎಂದು ತಿಳಿಸಿದ್ದಾರೆ.
ಮೋದಿ ಅವರು ತಮ್ಮ ಪತ್ರದಲ್ಲಿ, ಜಾಗತಿಕ ಮಟ್ಟದಲ್ಲಿ ಸಂಘರ್ಷಗಳು ನಡೆಯುತ್ತಿದ್ದರೂ ಭಾರತವು ಸ್ಥಿರತೆ ಮತ್ತು ಸೂಕ್ಷ್ಮತೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಹಿಗ್ಗಾಮುಗ್ಗವಾಗಿ ಹೇಳಿದ್ದಾರೆ. ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ. ಈ ವರ್ಷದ ದೀಪಾವಳಿ ವಿಶೇಷವಾಗಿ ಇದು ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಾಣದ ನಂತರದ ಎರಡನೇ ದೀಪಾವಳಿ. ಶ್ರೀರಾಮನು ನಮಗೆ ಧರ್ಮವನ್ನು ಎತ್ತಿಹಿಡಿಯಲು, ಅನ್ಯಾಯದ ವಿರುದ್ಧ ಧೈರ್ಯದಿಂದ ನಿಲ್ಲಲು ಪ್ರೇರಣೆ ನೀಡುತ್ತಾನೆ ಎಂದು ಮೋದಿ ಹೇಳಿದರು.
ಕೆಲವು ತಿಂಗಳುಗಳ ಹಿಂದೆ ನಡೆದ ಆಪರೇಶನ್ ಸಿಂಧೂರ್ ಸಮಯದಲ್ಲಿ ಭಾರತವು ಧರ್ಮವನ್ನು ಕಾಪಾಡಿ, ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿತು. ಇದೇ ನಮ್ಮ ಮೌಲ್ಯಗಳ ಜೀವಂತ ಉದಾಹರಣೆ. ಈ ದೀಪಾವಳಿ ವಿಶೇಷವಾಗಿದೆ ಏಕೆಂದರೆ ಮೊತ್ತಮೊದಲ ಬಾರಿಗೆ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಬೇರು ಸಮೇತ ನಿರ್ಮೂಲನೆ ಮಾಡಿದ ಜಿಲ್ಲೆಗಳಲ್ಲಿ ದೀಪಾವಳಿ ಬೆಳಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಹಿಂಸಾಚಾರದ ಹಾದಿಯನ್ನು ತ್ಯಜಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿರುವುದು ರಾಷ್ಟ್ರದ ದೊಡ್ಡ ಸಾಧನೆ ಎಂದು ಅವರು ಹೇಳಿದರು. ದೇಶವು ಮುಂದಿನ ಪೀಳಿಗೆಯ ಸುಧಾರಣೆಗಳತ್ತ ಹೆಜ್ಜೆ ಇಟ್ಟಿದ್ದು, ಜಿಎಸ್‌ಟಿಯಲ್ಲಿ ಬದಲಾವಣೆಗಳನ್ನೂ ತರಲಾಗಿದೆ ಎಂದರು. ಮೋದಿ ಅವರು ಆತ್ಮನಿರ್ಭರ ಭಾರತ ಕುರಿತು ಮಾತನಾಡಿ, ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುವುದು, ಎಲ್ಲ ಭಾಷೆಗಳನ್ನು ಗೌರವಿಸುವುದು, ಸ್ವಚ್ಛತೆಯನ್ನು ಕಾಪಾಡುವುದು ಮತ್ತು ಆರೋಗ್ಯದತ್ತ ಗಮನ ನೀಡುವುದು ನಾಗರಿಕರಾಗಿ ನಮ್ಮ ಕರ್ತವ್ಯ ಎಂದರು. ಆಹಾರದಲ್ಲಿ ಎಣ್ಣೆಯ ಬಳಕೆಯನ್ನು ಶೇಕಡಾ 10ರಷ್ಟು ಕಡಿಮೆ ಮಾಡಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದರು.
ಪತ್ರದ ಅಂತ್ಯದಲ್ಲಿ, ಒಂದು ದೀಪ ಮತ್ತೊಂದು ದೀಪವನ್ನು ಬೆಳಗಿದಾಗ ಅದರ ಬೆಳಕು ಕಡಿಮೆಯಾಗುವುದಿಲ್ಲ, ಬದಲಾಗಿ ಇನ್ನಷ್ಟು ಪ್ರಕಾಶಮಾನವಾಗುತ್ತದೆ. ಅದೇ ರೀತಿಯಾಗಿ, ಈ ದೀಪಾವಳಿಯಲ್ಲಿ ನಾವು ಸಮಾಜದಲ್ಲಿ ಸಾಮರಸ್ಯ, ಸಹಕಾರ ಮತ್ತು ಸಕಾರಾತ್ಮಕತೆಯ ದೀಪಗಳನ್ನು ಬೆಳಗಿಸೋಣ ಎಂದು ಬರೆದಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

