ರಸ್ತೆ ಗುಂಡಿ ಸಮಸ್ಯೆ ಅಂದ್ರೆ, ಇದು ನಮ್ಮ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಣೋ ಸಾಮಾನ್ಯ ಸಮಸ್ಯೆ. ಅದರಲ್ಲೂ ಬೆಂಗಳೂರು ನಗರದಲ್ಲಂತೂ ಈ ವಿಷಯ ಕೆಲಕಾಲ ಭಾರೀ ಚರ್ಚೆಗೆ ಕಾರಣವಾಗಿತ್ತು. ರಸ್ತೆಗುಂಡಿಗಳ ವಿಚಾರ ರಾಜಕೀಯ ಹಾದಿಗೂ ತಲುಪಿತ್ತು, X ನಲ್ಲಿ ರಾಜಕಾರಣಿಗಳು, ಐಟಿ ಕಂಪನಿಗಳ ಮುಖ್ಯಸ್ಥರು ಎಲ್ಲರೂ ಪರಸ್ಪರ ಟೀಕೆ-ಪ್ರತಿಟೀಕೆಗಳಲ್ಲಿ ತೊಡಗಿದ್ದರು.
ಇದನ್ನೇ ಹೋಲುವ ಪರಿಸ್ಥಿತಿ ಈಗ ತಮಿಳುನಾಡು, ವಿಶೇಷವಾಗಿ ಚೆನ್ನೈಯಲ್ಲೂ ಉಂಟಾಗಿದೆ. X ನಲ್ಲಿ ವಿ.ಎಲ್. ಅರುಣ್ ಎಂಬ ವ್ಯಕ್ತಿ ಚೆನ್ನೈನ ರಸ್ತೆಗಳ ಸ್ಥಿತಿ ತೋರಿಸುವ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ನೋಡಿದರೆ ಅಚ್ಚರಿಯಾಗುತ್ತೆ. ರಸ್ತೆಗಳಲ್ಲಿ ಎಲ್ಲೆಡೆ ಗುಂಡಿಗಳೇ ಗುಂಡಿಗಳು! ಚಂದ್ರನ ಮೇಲ್ಮೈ ಹೀಗಿರಬಹುದು ಅನ್ಸುತ್ತೆ ಅನ್ನೋಷ್ಟು ಹಾಳಾಗಿದೆ ರಸ್ತೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಜನರು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದಾರೆ. ಹಿನ್ನೆಲೆ ಏನು ಅಂದ್ರೆ ತಮಿಳುನಾಡಿನಲ್ಲಿ ಕಳೆದ ವಾರದಿಂದಲೇ ಭಾರೀ ಮಳೆ ಸುರಿಯುತ್ತಿದ್ದು, ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆಯಿಂದಾಗಿ ರಸ್ತೆಗಳು ಇನ್ನಷ್ಟು ಹಾಳಾಗಿವೆ. ಚೆನ್ನೈ ವಿಮಾನ ನಿಲ್ದಾಣದವರೆಗೂ ನೀರು ತುಂಬಿ, ರನ್‌ವೇಗಳು ಜಲಾವೃತಗೊಂಡಿವೆ. ದಕ್ಷಿಣ ಚೆನ್ನೈನ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ನೀಲಗಿರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ರೈಲುಗಳಿಗೂ ವಿಳಂಬ ಉಂಟಾಗಿದೆ.
ಮತ್ತೊಂದೆಡೆ, ತಮಿಳುನಾಡಿನಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ಅದರ ಎಫೆಕ್ಟ್ ಕರ್ನಾಟಕದ ಮೇಲೂ ತಾಕಿದೆ. ಬೆಂಗಳೂರಿನಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಇದರ ನಡುವೆ ಸಿಎಂ ಸ್ಟಾಲಿನ್ ಅವರು ಚೆನ್ನೈಯ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರದಿಂದ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಳೆಯ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಅವರು ಕರಾವಳಿ ಮತ್ತು ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಒಟ್ಟಾರೆ ಹೇಳಬೇಕೆಂದರೆ ಬೆಂಗಳೂರು, ಚೆನ್ನೈ ಎರಡೂ ಮೆಟ್ರೋ ನಗರಗಳು ಮಳೆ ಬಂತು ಅಂದ್ರೆ ರಸ್ತೆಗುಂಡಿಗಳಿಂದ ನರಳುವ ಪರಿಸ್ಥಿತಿಯಲ್ಲಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

