ತುಂಬಾ ಜನ ಆರೋಗ್ಯಕರವಾದ ಊಟಾ ಮಾಡ್ತಾರೆ. ಹಸಿ ತರಕಾರಿ, ಹೆಚ್ಚು ಎಣ್ಣೆ, ಬೆಣ್ಣೆ ಬಳಸದೇ ಮಾಡಿದ ಸೂಪ್, ದಾಲ್, ಚಪಾತಿ ಎಲ್ಲಾ ತಿಂತಾರೆ. ಫ್ರೆಶ್ ಹಣ್ಣುಗಳನ್ನ ಕೂಡ ತಿಂತಾರೆ. ಆದ್ರೆ ಅದಾದ ಬಳಿಕ, ಕೆಲ ತಪ್ಪುಗಳನ್ನು ಮಾಡ್ತಾರೆ. ಆ ತಪ್ಪುಗಳ ಕಾರಣದಿಂದಲೇ, ನೀವೆಷ್ಟೇ ಒಳ್ಳೆ ಆಹಾರ ತಿಂದ್ರೂ, ಅದರಿಂದ ಆರೋಗ್ಯಕ್ಕೇನೂ ಪ್ರಯೋಜನವಾಗುವುದಿಲ್ಲ. ಹಾಗಾದ್ರೆ ಬನ್ನಿ ಆ ತಪ್ಪುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ.
ಮೊದಲ ತಪ್ಪು ಅಂದ್ರೆ ಹಸಿವಾಗದೇ ಆಹಾರ ಸೇವಿಸೋದು. ಬೆಳಿಗ್ಗೆ ತಿಂಡಿ ತಿಂದು ಒಂದು ಗಂಟೆಯೂ ಕಳೆದಿರುವುದಿಲ್ಲ, ಆಗಲೇ ಸ್ನ್ಯಾಕ್ಸ್ ತಿನ್ನೋದು. ಊಟವಾಗಿ ಕೆಲ ಸಮಯವಾಗಿರುವುದಿಲ್ಲ, ಆಗಲೇ ಟೀ- ಬಿಸ್ಕೇಟ್ಸ್ ತಿನ್ನೋದು. ಹೀಗೆ ಮಧ್ಯೆ ಮಧ್ಯೆ ಏನಾದ್ರೂ ತಿಂತಾನೇ ಇರೋದು ನಾವು ಮಾಡುವ ಮೊದಲ ತಪ್ಪು. ಇದರಿಂದಲೇ ಜೀರ್ಣಕ್ರಿಯೆ ಸಮಸ್ಯೆ ಬರುವುದು. ಹಾಗಾಗಿ ನಮಗೆ ಸರಿಯಾಗಿ ಹಸಿವಾದಾಗಲಷ್ಟೇ ನಾವು ಆಹಾರ ಸೇವಿಸಬೇಕು.
ಎರಡನೇಯ ತಪ್ಪು, ಕೋಪದಲ್ಲಿ ಊಟ ಮಾಡುವುದು. ಕೋಪ ಬಂದಾಗ ನಮ್ಮ ಹಸಿವು ಇಂಗಿ ಹೋಗುತ್ತದೆ. ನಾವು ಬೇರೆ ವಿಷಯದ ಬಗ್ಗೆ ಯೋಚಿಸುವುದರಿಂದ ನಾವು ಎಷ್ಟೇ ಆಹಾರ ಸೇವಿಸಿದರೂ ಪ್ರಯೋಜನವಾಗುವುದಿಲ್ಲ. ಹಾಗಾಗಿ ಕೋಪ, ಟೆನ್ಶನ್ ಮಾಡಿಕೊಂಡು ಊಟ ಮಾಡಬೇಡಿ. ಊಟದ ಸಮಯದಲ್ಲಿ ಮೊಬೈಲ್ ದೂರವಿಟ್ಟು, ಉಳಿದೆಲ್ಲ ಯೋಚನೆ ದೂರವಿಟ್ಟು, ಆರಾಮವಾಗಿ ನಿಶ್ಚಿಂತೆಯಿಂದ ಊಟ ಮಾಡಿ.
ಮೂರನೇಯ ತಪ್ಪು, ಮೊಬೈಲ್, ಟಿವಿ, ಲ್ಯಾಪ್‌ಟಾಪ್ ನೋಡುತ್ತ ಊಟ ಮಾಡುವುದು. ಹೆಚ್ಚಿನವರಿಗೆ ಟಿವಿ ನೋಡುತ್ತ, ಊಟ ಮಾಡುವ ಅಭ್ಯಾಸವಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ಆಹಾರವನ್ನು ಸರಿಯಾಗಿ ಅಗಿದು ತಿನ್ನುವುದಿಲ್ಲ. ಯಾಕಂದ್ರೆ ಲಕ್ಷ್ಯ ಟಿವಿಯ ಕಡೆ ಇರುತ್ತದೆ. ಹಾಗಾಗಿ ಏನು ತಿನ್ನುತ್ತಿದ್ದೇವೆ ಅನ್ನುವ ಪರಿವಿಲ್ಲದೇ, ಗಬ ಗಬ ಎಂದು ತಿಂದು ಬಿಡುತ್ತೇವೆ. ಈ ಕಾರಣದಿಂದ ನಮ್ಮ ದೇಹದಲ್ಲಿ , ಅಗಿಯದ ಆಹಾರ ಬದಿ ಬದಿಗೆ ಸೇರಿ, ದೇಹ ಶುದ್ಧಿಗೆ ತೊಂದರೆ ಕೊಡುತ್ತದೆ. ಆಗಲೇ ಕೂದಲು ಉದುರುವ ಸಮಸ್ಯೆ, ಮೊಡವೆ, ತಲೆ ನೋವು, ಕೈ ಕಾಲು ನೋವು ಇತ್ಯಾದಿ ಬರುತ್ತದೆ.
ನಾಲ್ಕನೇಯದ್ದು ಫೋರ್ಕ್, ಸ್ಪೂನ್‌ನಿಂದ ತಿಂಡಿ ತಿನ್ನೋದು. ಆಂಗ್ಲರು ಕಲಿಸಿಕೊಟ್ಟು ಹೋದ ಈ ವ್ಯವಸ್ಥೆಯಿಂದ ಹಲವರು ಇನ್ನೂ ಹೊರ ಬಂದಿಲ್ಲ. ಎಷ್ಟೋ ಜನ ತಮ್ಮ ಮಕ್ಕಳಿಗೆ ಪ್ರತಿದಿನ ಊಟ, ತಿಂಡಿಯನ್ನು ಫೋರ್ಕ್‌ನಿಂದಲೇ ತಿನ್ನಬೇಕೆಂದು ಹೇಳಿಕೊಡುತ್ತಾರೆ. ಹಲವರು ಫೋರ್ಕ್, ಸ್ಪೂನ್ ಬಳಸಿಯೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿರ್ತಾರೆ. ಆದ್ರೆ ನಮ್ಮ ವೇದಗಳಲ್ಲಿ ಸ್ವಚ್ಛವಾಗಿ ಕೈ ತೊಳೆದು, ಕೈಯಿಂದಲೇ ಊಟ ಮಾಡಬೇಕೆಂದು ಹೇಳಿದ್ದಾರೆ. ಯಾಕಂದ್ರೆ ಕೈ ಬೆರಳಿಗೂ, ಮೆದುಳಿಗೂ ಕನೆಕ್ಷನ್ ಇದ್ದು, ಅದರಿಂದಲೇ ನಮ್ಮ ಆಹಾರ ಪಚನವಾಗುತ್ತದೆ.
ಐದನೇಯ ತಪ್ಪು ಹಲವು ಆಹಾರಗಳನ್ನು ಸೇರಿಸಿ ತಿನ್ನುವುದು. ಚಪಾತಿ, ಪಲ್ಯ, ಅನ್ನ, ಸಾರು, ಮೊಸರು, ಮಜ್ಜಿಗೆ, ಸಿಹಿ ತಿಂಡಿ, ಹಪ್ಪಳ, ಸಂಡಿಗೆ ಹೀಗೆ ಹಲವಾರು ಆಹಾರಗಳನ್ನು ಒಮ್ಮೆಲೆ ತಿಂದ್ರೆ ಅದನ್ನ ಜೀರ್ಣಿಸಿಕೊಳ್ಳುವ ತಾಕತ್ತು ನಮ್ಮ ದೇಹಕ್ಕಿರುವುದಿಲ್ಲ. ಹಾಗಾಗಿಯೇ ಇಷ್ಟೆಲ್ಲ ಅಡುಗೆಯನ್ನು ಯಾವುದಾದರೂ ಕಾರ್ಯಕ್ರಮದ ಸಮಯದಲ್ಲಷ್ಟೇ ಮಾಡಲಾಗುತ್ತದೆ. ಇಂಥ ಅಡುಗೆಯನ್ನ ನೀವು ದಿನಾ ತಿಂದರೆ, ನಿಮ್ಮ ದೇಹ ಅದನ್ನ ಜೀರ್ಣಿಸಿಕೊಳ್ಳಲಾಗದೇ, ಬೊಜ್ಜು ಬೆಳೆಯುತ್ತದೆ.