ಮಂಗಳೂರು: ರಾಜ್ಯದಲ್ಲಿ ತಲೆ ಎತ್ತಿರುವ ಡ್ರಗ್ಸ್ ದಂಧೆಯಿಂದ ಮಗಳನ್ನು ರಕ್ಷಿಸಲು ಕ್ರಿಶ್ಚಿಯನ್ ಮಹಿಳೆ ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದಿದ್ದಾರೆ. ಮಂಗಳೂರಿನ ಕ್ರೈಸ್ತ ಮಹಿಳೆ ವಿಶ್ವಹಿಂದೂ ಪರಿಷತ್ ಮುಖಂಡರ ಮೊರೆ ಹೋಗಿದ್ದು ಪತ್ರದ ಮೂಲಕ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
ಮಂಗಳೂರಿನ ಬಿಜೈ ಬಳಿಯ ಗ್ರೇಸಿ ಪಿಂಟೋ ಎಂಬ ಮಹಿಳೆ ತನ್ನ ಮಗಳನ್ನು ಡ್ರಗ್ಸ್ ಕೂಪದಿಂದ ಹೊರ ಬರುವಂತೆ ಮಾಡಲು ಸಹಾಯ ಕೋರಿ ಪತ್ರ ಬರೆದಿದ್ದಾರೆ. ಸುರತ್ಕಲ್ ನಿವಾಸಿ ಶರೀಫ್ ಸಿದ್ದಿಕಿ ಎಂಬಾತನ ಡ್ರಗ್ ದಂಧೆಯಲ್ಲಿ ನನ್ನ ಮಗಳು ಸಿಲುಕಿದ್ದಾಳೆ. ಕಳೆದ ಮೂರು ವರ್ಷಗಳಿಂದ ಡ್ರಗ್ ದಾಸಳಾಗಿರುವ ಮಗಳನ್ನು ಸರಿಪಡಿಸಿ ತನಗೆ ಒಪ್ಪಿಸುವಂತೆ ಮಹಿಳೆ ಪತ್ರದಲ್ಲಿ ತಿಳಿಸಿದ್ದಾರೆ.
ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯ, ಡ್ರಗ್ ಪೂರೈಕೆ ಮಾಡುತ್ತಿದ್ದು ಮಗಳು ಡ್ರಗ್ ಚಟಕ್ಕೆ ಬಿದ್ದು ಮಾನಸಿಕವಾಗಿ ಕುಗ್ಗಿ ಅಸ್ವಸ್ಥತೆ ಒಳಗಾಗಿದ್ದಾಳೆ. ಸಿದ್ದಿಕಿ ಮತ್ತು ಅವನ ಸ್ನೇಹಿತರಿಂದ ನಿರಂತರ ಡ್ರಗ್ ಪೂರೈಕೆ ಮತ್ತು ದೌರ್ಜನ್ಯ ನಡೆಯುತ್ತಿದ್ದು ಪೊಲೀಸ್ ಠಾಣೆ ಮತ್ತು ಸಮುದಾಯದ ಗುರುಗಳಿಗೆ ದೂರು ಕೊಟ್ಟರೂ ನ್ಯಾಯ ಸಿಕ್ಕಿಲ್ಲ. ನನ್ನ ಮಗಳನ್ನ ರಕ್ಷಣೆ ಮಾಡಿ ಎಂದು ಪತ್ರ ಬರೆದು ಮಹಿಳೆ ದಂಧೆಯಿಂದ ಮುಕ್ತಿ ಕೋರಿದ್ದಾರೆ.