Thursday, November 27, 2025

Latest Posts

ರಣ ಮಳೆಗೆ ಗುಡ್ಡ ಕುಸಿತ : ಸಾವನ್ನೇ ಗೆದ್ದು ಬಂದ ತಾಯಿ ಮಗ ; ರಕ್ಷಣಾ ಪಡೆಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ..!

- Advertisement -

ಮಂಗಳೂರು : ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ, ದೇರಳೆಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆ ಮೇಲೆ ಕುಸಿದು ಬಿದ್ದು 6 ವರ್ಷದ ಫಾತಿಮಾ ನಯೀಮ ಎನ್ನುವ ಮಗು ಮೃತಪಟ್ಟಿದೆ. ಮೊದಲಿಗೆ ಗಂಭೀರ ಸ್ಥಿತಿಯಲ್ಲಿದ್ದ ಫಾತಿಮಾ ನಯೀಮಳನ್ನು ರಕ್ಷಣೆ ಮಾಡಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಸಾವನ್ನಪ್ಪಿದ್ದಾಳೆ.

ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಣೆ ಮಾಡಿದ್ದರು. ಭಾರಿ ಮಳೆಯ ಪರಿಣಾಮ ಮಂಗಳೂರು ಸುತ್ತಮುತ್ತಲಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾ‌ರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳಲ್ಲಿ ನೀರು ಆವರಿಸಿದೆ.

ಮಂಗಳೂರಿನ ಹಲವು ಪ್ರದೇಶಗಳು ಜಲಾವೃತ..!

ಇನ್ನೂ ಕಲ್ಲಾಪುವಿನಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೆರೆಯಿಂದ ತೊದರೆಯಾಗಿದೆ. ತಲಪಾಡಿಯಲ್ಲಿ ಒಂದು ಮನೆಗೆ ನೀರು ನುಗ್ಗಿ ತೀವ್ರ ಹಾನಿಯಾಗಿದ್ದು, ರಾತ್ರಿಯೇ ಸಂತ್ರಸ್ತ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕರಾವಳಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆ ಸೇರಿದಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ ಜೂನ್​ 2ರವರೆಗೂ ಭಾರಿ ಮಳೆಯಾಗಲಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಪವಾಡ ಸದೃಶ ತಾಯಿ, ಮಗನ ರಕ್ಷಣೆ..

ಇನ್ನೂ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಧಾರಕಾರ ಮಳೆಗೆ ಗುಡ್ಡವೊಂದು ಕುಸಿದು ಮನೆಯೊಂದು ಸಂಪೂರ್ಣ ಕುಸಿದು ಓರ್ವ ಮಹಿಳೆ ಮೃತಪಟ್ಟು , ಇಬ್ಬರು ಗಾಯಗೊಂಡಿದ್ದಾರೆ. ಒಬ್ಬ ಮಹಿಳೆ ಹಾಗೂ ಇಬ್ಬರುಪುಟ್ಟ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡು ರಕ್ಷಣಾ‌ ಕಾರ್ಯದಿಂದ ಪವಾಡ ಸದೃಶವೆಂಬಂತೆ ರಕ್ಷಿಸಲಾಗಿದೆ.

ಗುಡ್ಡ ಕುಸಿದು ಮನೆಯ ಒಂದು ಭಾಗದಲ್ಲಿ ಮಲಗಿದ್ದ ಸೀತಾರಾಮ ಎನ್ನುವವರ ಪತ್ನಿ ಅಶ್ವಿನಿ ಹಾಗೂ ಇಬ್ಬರು 3 ಹಾಗೂ 2 ವರ್ಷದ ಇಬ್ಬರು ಮಕ್ಕಳು ಕುಸಿದ ಮನೆಯೊಳಗೆ ಸಿಲುಕಿಕೊಂಡಿದ್ದರು. ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು ರಕ್ಷಣಾ‌ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮನೆಯು ಸಂಪೂರ್ಣ ಕುಸಿದ ಪರಿಣಾಮ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಬಳಿಕ ಸ್ಥಳಕ್ಕೆ ಎನ್ ಡಿ ಆರ್ ಎಫ್, ಎಸ್ ಡಿಆರ್ ಪಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ರಕ್ಷಣಾ ಕಾರ್ಯ ಮುಂದುವರಿಸಿದ್ದರು. ತಾಯಿ ಹಾಗೂ ಇಬ್ಬರು ಮಕ್ಕಳ ರಕ್ಷಣೆಗೆ ಪಣ ತೊಟ್ಟಿದ್ದರು. ಆದರೆ ಒಬ್ಬ ಮಗನನ್ನು ಹಾಗೂ ತಾಯಿಯನ್ನು ರಕ್ಷಿಸಲಾಗಿದೆ. ಅದರೆ ಒಂದು ಮಗು ಮೃತಪಟ್ಟಿದೆ. ಪ್ರಮುಖವಾಗಿ ದುರಂತ ಸ್ಥಳದಲ್ಲಿ ವಾಹನಗಳು ತೆರಳಲು ಕಿರಿದಾದ ರಸ್ತೆಯಿದ್ದು, ನಿರಂತರ ಮಳೆ ಮುಂದುವರೆದ ಕಾರಣಕ್ಕೆ ಅದು ಸಾಧ್ಯವಾಗದಿರುವುದು ಹಿನ್ನಡೆಯಾಗಿತ್ತು

ಮಕ್ಕಳಿಗೆ ಏನೂ ಆಗಬಾರದು, ತಾಯಿಯ ಮಮತೆ..

ಇನ್ನೂ ಮನೆಯೊಳಗೆ ಸಿಲುಕಿರುವ ಮಹಿಳೆಯು ಕೊಂಚ ಮಾತನಾಡುತ್ತಿದ್ದು, ಒಂದು ಮಗು ಅಳುವ ಶಬ್ದ ಕೇಳುತಿತ್ತು. ಅಲ್ಲದೆ ತನಗೇನಾದರೂ ಆಗಲಿ ಅದರೆ ತನ್ನ ಮಕ್ಕಳಿಗೆ ಏನೂ ಆಗಬಾರದು ಎಂದು ಆ ಮಹಿಳೆ ಪುಟ್ಟ ಕಂದಮ್ಮಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡು ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವುದು ನಿಜಕ್ಕೂ ಆ ತಾಯಿಯ ಮಮತೆಯು ಮನಕಲಕುವಂತೆ ಮಾಡಿತ್ತು. ಆದರೆ ಅಂತಿವಾಗಿ ಇದೀಗ ತಾಯಿ ಹಾಗೂ ಮಗನನ್ನು ರಕ್ಷಿಸಿದ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಪಡೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -

Latest Posts

Don't Miss