National Political News: ಮದ್ಯನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇ.ಡಿ 6ನೇ ಬಾರಿಗೆ ಸಮನ್ಸ್ ನೀಡಿದೆ.
ಇದೇ ಫೆಬ್ರವರಿ 19ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ನೀಡಲಾಗಿದೆ. ನವೆಂಬರ್‌ನಿಂದ ಹಿಡಿದು ಇಲ್ಲಯವರೆಗೂ 6 ಬಾರಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್ ನೀಡಿದೆ. ಆದರೆ ಇಲ್ಲಿಯವರೆಗೂ ಕೇಜ್ರಿವಾಲ್ ನೆಪ ಹೇಳುತ್ತಲೇ, ವಿಚಾರಣೆಯನ್ನು ತಪ್ಪಿಸುತ್ತಿದ್ದಾರೆ.
ಹಾಗಾಗಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇ.ಡಿ. ಈವರೆಗೂ ಕೇಜ್ರಿವಾಲ್ ಕುಂಟು ನೆಪ ಹೇಳಿ. ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆಂದು ನೊಟೀಸ್‌ನಲ್ಲಿ ಆರೋಪಿಸಿದೆ. ಅಲ್ಲದೇ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೀಗೆ ಮಾಡಿದರೆ, ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಎಚ್ಚರಿಸಿದೆ.
ಇನ್ನು ಈ ಬಗ್ಗೆ ಮಾತನಾಡಿದ್ದ ಕೇಜ್ರಿವಾಲ್, ಇದು ರಾಜಕೀಯ ಪ್ರೇರಿತ ವಿಚಾರಣೆ. ಲೋಕಸಭಾ ಚುನಾವಣೆಗೆ ನಾನು ಪ್ರಚಾರಕ್ಕೆ ಹೋಗಬಾರದು ಎಂಬ ಕಾರಣಕ್ಕೆ, ಈ ಷಡ್ಯಂತ್ರ ರಚಿಸಲಾಗಿದೆ ಎಂದು ಆರೋಪಿಸಿದ್ದರು. ಹೀಗಾಗಿಯೇ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುತ್ತಿಲ್ಲವೆಂದೇ ಹೇಳಲಾಗಿದೆ.
ಇನ್ನು ರಾಮಮಂದಿರ ಉದ್ಘಾಟನೆ ನಿಷ್ಪ್ರಯೋಜಕ, ಚುನಾವಣಾ ತಂತ್ರ ಎಂದು ಹೇಳಿದ್ದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಜೊತೆ ಕುಟುಂಬ ಸಮೇತರಾಗಿ ಅಯೋಧ್ಯೆಗೆ ಹೋಗಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ.