ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿಯಬೇಕು. ಅದಾದ ಬಳಿಕ ನೀವು ವ್ಯಾಯಾಮ ಮಾಡಿದ ಮೇಲೆ, ಟೀ- ಕಾಫಿ ಕುಡಿಯುವ ಬದಲು ನಾವಿಂದು ಹೇಳುವ, ಮೂರು ರೀತಿಯ ಜ್ಯೂಸ್‌ನಲ್ಲಿ ಯಾವುದಾದರೂ ಒಂದು ಜ್ಯೂಸ್ ಕುಡಿದರೂ ಸಾಕು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನ ತುಂಬುತ್ತದೆ. ಹಾಗಾದ್ರೆ ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್‌ಗಳನ್ನ ಹೇಗೆ ಮಾಡೋದು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದು ಬೀಟ್‌ರೂಟ್ ಜ್ಯೂಸ್. ಎರಡು ಕ್ಯಾರೆಟ್, ಒಂದು ಬೀಟ್‌ರೂಟ್, ಒಂದು ಸೇಬು ಹಣ್ಣು, ಚಿಕ್ಕ ತುಂಡು ಹಸಿ ಶುಂಠಿ. ಇವಿಷ್ಟು ಈ ಜ್ಯೂಸ್ ಮಾಡೋಕ್ಕೆ ಬೇಕಾಗುವ ಸಾಮಗ್ರಿ. ಕ್ಯಾರೆಟ್, ಬೀಟ್‌ರೂಟ್ ಮತ್ತು ಸೇಬುವನ್ನು ಚಿಕ್ಕದಾಗಿ ಕತ್ತರಿಸಿ, ಶುಂಠಿಯೊಂದಿಗೆ ಜ್ಯೂಸರ್ ಜಾರ್‌ಗೆ ಹಾಕಿರಿ. ಇದಕ್ಕೆ ಬೇಕಾದ್ರೆ ನೀವು ಪುದೀನಾ ಎಲೆ ಹಾಕಬಹುದು. ಈಗ ಈ ಪೇಸ್ಟ್‌ನ್ನ ಒಂದು ಬಟ್ಟೆಯ ಮೂಲಕ ಗಾಳಿಸಿ, ಜ್ಯೂಸ್ ತೆಗೆಯಿರಿ. ಇದನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನೆನಪಿರಲಿ ಇದಕ್ಕೆ ನೀವು ಉಪ್ಪು, ಸಕ್ಕರೆ, ಚಾಟ್ ಮಸಾಲೆ ಪೌಡರ್ ಏನೂ ಹಾಕಬಾರದು. ಮತ್ತು ಶುಗರ್ ಇದ್ದವರು ಈ ಜ್ಯೂಸ್ ಕುಡಿಯಬಾರದು.
ಎರಡನೇಯ ಜ್ಯೂಸ್ ಗ್ರೀನ್ ಜ್ಯೂಸ್. ಒಂದು ಸೌತೇಕಾಯಿ, ಒಂದು ಆ್ಯಪಲ್, ಒಂದು ಬೌಲ್ ಪಾಲಕ್, ಅರ್ಧ ಬೌಲ್ ಪುದೀನಾ ಎಲೆ, ಚಿಕ್ಕ ತುಂಡು ಹಸಿ ಶುಂಠಿ. ಇವಿಷ್ಟು ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿ. ಈ ಎಲ್ಲ ತರಕಾರಿ, ಹಣ್ಣು ಮತ್ತು ಸೊಪ್ಪನ್ನ ಜೂಸರ್ಗೆ ಹಾಕಿ, ಜ್ಯೂಸ್ ತಯಾರಿಸಿ. ಬಟ್ಟೆಯ ಮೂಲಕ ಜ್ಯೂಸ್ ಗಾಳಿಸಿ. ಈಗ ಈ ಜ್ಯೂಸ್‌ಗೆ ಒಂದು ಸ್ಪೂನ್ ನಿಂಬೆರಸ ಸೇರಿಸಿ.
ಮೂರನೇಯದು ಕ್ಯಾರೆಟ್ ಜ್ಯೂಸ್. ಒಂದು ಕ್ಯಾರೆಟ್, ಒಂದು ಆರೆಂಜ್, ಒಂದು ಚಿಕ್ಕ ಬೌಲ್ ಪಪ್ಪಾಯಿ, ಚಿಕ್ಕ ತುಂಡು ಹಸಿ ಶುಂಠಿ. ಇವಿಷ್ಟು ಈ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿ. ಮೊದಲನೇಯದಾಗಿ ಕಿತ್ತಳೆ ಹಣ್ಣಿನ ಬೀಜವನ್ನು ತೆಗೆಯಿರಿ. ಈಗ ಕಿತ್ತಳೆ, ಕ್ಯಾರೆಟ್, ಪಪ್ಪಾಯಿ, ಹಸಿ ಶುಂಠಿಯನ್ನ ಜ್ಯೂಸರ್‌ಗೆ ಹಾಕಿ, ಜ್ಯೂಸ್ ತಯಾರಿಸಿ.