Political News: ಕೇಂದ್ರ ಸರ್ಕಾರ ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ ಪ್ರಸ್ತಾಪವನ್ನು ಯಾರೂ ಬೆಂಬಲಿಸಬಾರದು. ಈ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಕೈ ಜೋಡಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಬಿಜೆಪಿಯೇತರ ರಾಜ್ಯಗಳ ಸಿಎಂಗಳಿಗೆ ಹಾಗೂ ಪಕ್ಷಗಳ ನಾಯಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರ್ನಾಟಕ, ಕೇರಳ,ತೆಲಂಗಾಣ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಗೆ ಪತ್ರ ಬರೆದು ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಯಾವುದೇ ಒತ್ತಡಕ್ಕೆ ಒಳಗಾಗದೆ ರಾಜಿ ಇಲ್ಲದ ಹೋರಾಟವನ್ನು ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ದೇಶದ ದಕ್ಷಿಣ ಭಾಗದಲ್ಲಿನ ರಾಜ್ಯಗಳನ್ನು ಒಳಗೊಂಡು ಉತ್ತರದವರೆಗೂ ಕೇಂದ್ರ ಗೊತ್ತು ಮಾಡಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಪಕ್ಷಗಳು ಜಂಟಿ ಕ್ರಿಯಾ ಸಮಿತಿ, ಜೆಎಸಿಗೆ ಬೆಂಬಲವನ್ನು ನೀಡಬೇಕು. ಜೆಎಸಿಯ ಕಾರ್ಯ ಹಾಗೂ ಸಂಘಟನೆಗಾಗಿ ನೆರವಾಗಲು ತಲಾ ಒಬ್ಬ ಹಿರಿಯ ಪ್ರತಿನಿಧಿಯನ್ನು ನಾಮ ನಿರ್ದೇಶನ ಮಾಡುವಂತೆ ಸ್ಟಾಲಿನ್ ತಮ್ಮ ಪತ್ರದಲ್ಲಿ ಕೋರಿದ್ದಾರೆ.
ಅಲ್ಲದೆ ಮಾರ್ಚ್ 25 ರಂದು ಜೆಎಸಿಯ ಉದ್ಘಾಟನೆಯ ಕಾರ್ಯಕ್ರಮವು ಚೆನೈನಲ್ಲಿ ನಡೆಯಲಿದೆ. ಇದರಲ್ಲಿ ನಾವೆಲ್ಲರೂ ರಾಜಕಾರಣವನ್ನು ಬದಿಗಿಟ್ಟು ನಮ್ಮ ಜನರ ರಕ್ಷಕರಾಗಿ ಭಾಗವಹಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಇನ್ನೂ ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಹೊರಟಿರುವ ಕೇಂದ್ರದ ತೀರ್ಮಾನದಲ್ಲಿ ಎರಡು ವಿಧಾನಗಳು ಇವೆ ಎಂಬ ಬಗ್ಗೆ ವರದಿಗಳು ಹೇಳುತ್ತಿವೆ. ಮೊದಲನೆಯದಾಗಿ ದೇಶದಲ್ಲಿ ಅಸ್ತಿತ್ವದಲ್ಲಿರುವ 543 ಲೋಕಸಭಾ ಸ್ಥಾನಗಳನ್ನು ರಾಜ್ಯಗಳ ನಡುವೆ ಮರುಹಂಚಿಕೆ ಮಾಡುವುದು. ಎರಡನೆಯದಾಗಿ, ದೇಶದಲ್ಲಿ ಒಟ್ಟು 800ಕ್ಕಿಂತಲೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಸೃಷ್ಟಿಸಬಹುದು. ಒಂದು ವೇಳೆ ಈ ಎರಡೂ ವಿಧಾನಗಳ ಆಧಾರದಲ್ಲಿ ಡಿಲಿಮಿಟೇಶನ್‌ಗೆ ಮುಂದಾದರೆ ಜನಸಂಖ್ಯೆಯನ್ನು ನಿಯಂತ್ರಿಸಿರುವ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಅತ್ಯಂತ ಕಡಿಮೆಯಾಗಲಿವೆ. ಅಲ್ಲದೆ ರಾಷ್ಟ್ರೀಯ ಅಭಿವೃದ್ದಿಯ ಗುರಿ ಸಾಧನೆಗಾಗಿ ಹಾಗೂ ಪರಿಣಾಮಕಾರಿ ಜನಸಂಖ್ಯೆಯ ನಿಯಂತ್ರಣಕ್ಕೆ ನಾವು ಈ ರೀತಿ ಬೆಲೆ ತೆರಬೇಕಾದ ಸ್ಥಿತಿ ಬರಬಾರದು ಎಂದು ಡಿಎಂಕೆ ಮುಖ್ಯಸ್ಥ ಕಿವಿಮಾತು ಹೇಳಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾತ್ರ ಯಾವುದೇ ಸ್ಪಷ್ಟನೆಯನ್ನು ನೀಡಲು ಮುಂದಾಗಿಲ್ಲ. ಅಲ್ಲದೆ ನಮ್ಮಲ್ಲಿ ಮೂಡಿರುವ ಆತಂಕವನ್ನು ಪರಿಹರಿಸುವ ಕನಿಷ್ಠ ಬದ್ದತೆಯನ್ನೂ ಸಹ ತೋರಿಲ್ಲ ಎಂದು ದೂರಿದ್ದಾರೆ. ಅಲ್ಲದೆ ಕೇಂದ್ರದ ಪ್ರತಿನಿಧಿಗಳೂ ಸಹ ಇದರ ಬಗ್ಗೆ ಉಡಾಫೆ ಮಾತುಗಳನ್ನಾಡುತ್ತಿದ್ದಾರೆ. ಡಿಲಿಮಿಟೇಶನ್ ಪ್ರಕ್ರಿಯೆಯಿಂದ ಯಾವುದೇ ರಾಜ್ಯವು ತನ್ನ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಬೇಜವಾಬ್ದಾರಿಯ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ ಎಂದು ಸ್ಟಾಲಿನ್ ಟೀಕಾಪ್ರಹಾರ ನಡೆಸಿದ್ದಾರೆ.
ತಮಿಳಿನಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡಿ..
ಇನ್ನೂ ಡಿಲಿಮಿಟೇಶನ್ ಪ್ರಕ್ರಿಯೆಯ ವಿರುದ್ಧ ಬಹಿರಂಗ ಸಮರ ಸಾರಿರುವ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧಿಸುತ್ತಿರುವ ನೀವು ತಮಿಳುನಾಡಿನಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣವನ್ನು ತಮಿಳು ಭಾಷೆಯಲ್ಲಿಯೇ ಕೊಡಿ ಎಂದು ಟಾಂಗ್ ನೀಡಿದ್ದಾರೆ.
ಭಾಷಾ ವಿಚಾರ ಸೇರಿದಂತೆ ಮುಖ್ಯವಾಗಿ ಹಿಂದಿ ಹೇರಿಕೆಯ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ನಮ್ಮ ಸರ್ಕಾರದಲ್ಲಿ ಅನೇಕ ಬದಲಾವಣೆಯನ್ನು ತರಲಾಗಿದೆ. ಕೇಂದ್ರದ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಈಗ ಆಯಾ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಲಾಗಿದೆ. ಅದರಂತೆ ಇಂತಹ ಪರೀಕ್ಷೆಗಳನ್ನು ತಮಿಳಿನಲ್ಲಿ ಬರೆಯುವಂತೆ ಮೋದಿ ಸರ್ಕಾರ ಮಾಡಿದೆ ಎಂದು ಶಾ ತಿವಿದಿದ್ದಾರೆ. ನಾವು ಮಾಡಿದ ಹಾಗೆ ವಿದ್ಯಾರ್ಥಿಗಳ ಹಿತಕ್ಕಾಗಿ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಪರೀಕ್ಷೆಗಳನ್ನೂ ಸಹ ತಮಿಳಿನಲ್ಲಿಯೇ ನಡೆಸಬೇಕೆಂದು ನಾನು ಮುಖ್ಯಮಂತ್ರಿಯವರಿಗೆ ಕೋರುತ್ತೇನೆ ಎನ್ನುವ ಮೂಲಕ ಸ್ಟಾಲಿನ್ ಅವರಿಗೆ ಭಾಷೆಯ ವಿಚಾರದಲ್ಲಿ ಶಾ ಕೌಂಟರ್ ನೀಡಿದ್ದಾರೆ.