Saturday, June 14, 2025

Latest Posts

ಪ್ರತಿಯೊಂದು ಜೀವವೂ ನಮಗೆ ಮುಖ್ಯ : ಕಾಲ್ತುಳಿತ ದುರಂತಕ್ಕೆ ಆರ್​ಸಿಬಿ ಫ್ರಾಂಚೈಸಿ ಹೇಳಿದ್ದೇನು..?

- Advertisement -

Sports News: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿರುವ ಆರ್​ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಆರ್‌ಸಿಬಿ ಫ್ರಾಂಚೈಸಿ, ತಂಡದ ಆಗಮನದ ನಿರೀಕ್ಷೆಯಲ್ಲಿ ಅಭಿಮಾನಿಗಳು ಸೇರಿದ್ದಾಗ ನಡೆದಿರುವ ಅನಿರೀಕ್ಷಿತ ಘಟನೆಗಳ ಕುರಿತು ಮಾಧ್ಯಮಗಳ ವರದಿಗಳ ಮೂಲಕ ತಿಳಿದಿದೆ. ಈ ರೀತಿಯ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ.

ಸ್ಥಳೀಯ ಆಡಳಿತದ ಮಾರ್ಗದರ್ಶನ ಅನುಸರಿಸಿದ್ದೇವೆ..

ಘಟನೆಯಲ್ಲಿ ಆಗಿರುವ ಜೀವಹಾನಿಗಳಿಗೆ ಆರ್‌ಸಿಬಿ ಫ್ರಾಂಚೈಸಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಮೃತರ ಕುಟುಂಬಗಳಿಗೆ ಸಂತಾಪವನ್ನ ವ್ಯಕ್ತಪಡಿಸುತ್ತದೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ತ್ವರಿತವಾಗಿ ಬದಲಾವಣೆ ಮಾಡಿದ್ದೇವೆ. ಅಲ್ಲದೆ ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಅಭಿಮಾನಿಗಳಿಗೆ ನಾವು ಒತ್ತಾಯಿಸುತ್ತೇವೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಟ್ವೀಟ್ಟರ್​ ಪೋಸ್ಸ್​ ಮೂಲಕ ತಿಳಿಸಿದೆ.

ಸಾವಿನ ದವಡೆಗೆ ನೂಕಿದ ಉನ್ಮಾದದ ಅಭಿಮಾನ..

ಇನ್ನೂ ಪ್ರಮುಖವಾಗಿ ಸತತ 18 ವರ್ಷಗಳ ಹೋರಾಟದ ಬಳಿಕ ಐಪಿಎಲ್ 18ನೇ ಆವೃತ್ತಿಯಯಲ್ಲಿ ಆರ್​ಸಿಬಿ ಚಾಂಪಿಯನ್ ಆಗಿದ್ದು, ಇದರ ವಿಜಯೋತ್ಸವಕ್ಕೆ ಸಾಕ್ಷಿಯಾಗಲು ನಾಡಿನ ದಶದಿಕ್ಕುಗಳಿಂದಲೂ ಯುವ ಅಭಿಮಾನಿಗಳು ಸಾಗರೋಪಾದಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನತ್ತ ಹರಿದು ಬಂದಿದ್ದೆ ಈ ದುರ್ಘಟನೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಉನ್ಮಾದದ ಅಭಿಮಾನವು ಅನ್ಯಾಯವಾಗಿ 11 ಜನರನ್ನು ಸಾವಿನ ದವಡೆಗೆ ನೂಕುವಂತಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನತ್ತ ಹರದು ಬಂದಿತ್ತು ಜನಸಾಗರ..!

ಅಲ್ಲದೆ ಬಸ್, ಕಾರು ಹೀಗೆ ಸ್ವಂತ ವಾಹನಗಳಲ್ಲಿ ಸಾವಿರಾರು ಜನರು ಬಂದಿದ್ದರು. ಬೆಂಗಳೂಳರಿನ ಎಲ್ಲ ರಸ್ತೆಗಳೂ ಕೇವಲ ಚಿನ್ನಸ್ವಾಮಿ ಸ್ಟೇಡಿಯಂನತ್ತ ಮುಖಮಾಡಿದಂತಾಗಿತ್ತು. ಮಧ್ಯಾಹ್ನ ಒಂದು ಗಂಟೆಯ ನಂತರ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನತ್ತ ಪ್ರವಾಹದಂತೆ ಜನರು ಹರಿದು ಬಂದಿದ್ದರು. ಹೀಗಾಗಿ ಸ್ಟೇಡಿಯಂ ಸುತ್ತ ಮುತ್ತ ಲಕ್ಷಾಂತರ ಸಂಖ್ಯೆಯಲ್ಲಿ ಜನಸ್ತೋಮ ಜಮಾಯಿಸಿತ್ತು.

ಸ್ಲ್ಯಾಬ್ ಮೇಲೆ ನಿಂತುಕೊಂಡಿದ್ದ ಅಭಿಮಾನಿಗಳು..

ಅಲ್ಲಿಯೂ ಭದ್ರತೆಗಾಗಿ ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಅವರು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಜನರು ಒಬ್ಬೊಬ್ಬರಂತೆ ಸ್ಟೇಡಿಯಂ ಒಳಗೆ ನುಗ್ಗಲು ಯತ್ನಿಸಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಒಳಗೆ ನಡೆಯಬೇಕಿದ್ದ ಅಭಿನಂದನಾ ಸಮಾರಂಭವನ್ನು ನೋಡಲು ಅಭಿಮಾನಿಗಳು ಸ್ಟೇಡಿಯಂ ಗೇಟ್ ಬಳಿ ಇರುವ ಸಿಮೆಂಟ್ ಸ್ಲ್ಯಾಬ್ ಮೇಲೆ ನಿಂತಿದ್ದರು. ಭಾರ ತಾಳಲಾರದೆ ಅದೂ ಸಹ ಕುಸಿದು ಬಿದ್ದದ್ದೂ ಸಹ ಅನಾಹುತಕ್ಕೆ ಕಾರಣವಾಗಿದೆ.

ಈ ದುರ್ಘಟನೆಯ ಅಮಾಯಕ ಅಭಿಮಾನಿಗಳ ಕುಟುಂಬಗಳಲ್ಲಿ ಕತ್ತಲೆಯನ್ನು ತಂದಿಟ್ಟಿದ್ದು, ಕುಟುಂಬಸ್ಥರನ್ನು ಕಳೆದುಕೊಂಡ, ಹೆತ್ತವರು ಮಕ್ಕಳನ್ನು ದೂರ ಮಾಡಿಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು ಮಾತ್ರ ನಿಜಕ್ಕೂ ದುರಂತವೆ ಸರಿ..!

- Advertisement -

Latest Posts

Don't Miss