ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಭೀಕರ ಕಾಲ್ತುಳಿತ, ನೂಕುನುಗ್ಗಲಿನಿಂದ ದುರಂತ ಸಂಭವಿಸಿ 11 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ ದೇಶದ ಹಲವು ನಾಯಕರು ಪಕ್ಷಾತೀತಿವಾಗಿ ಕಂಬನಿ ಮಿಡಿದಿದ್ದು, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಕೂಡ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಂಭ್ರಮದಲ್ಲಿ ಇದ್ದೇವು, ದುಖಃದಲ್ಲೂ ಜೊತೆಗೆ ಇರ್ತೀವಿ..
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ತಂಡದ ಐಪಿಎಲ್ 2025ರ ಗೆಲುವಿನ ಸಂಭ್ರಮಾಚರಣೆಯ ವೇಳೆ ಈ ಘಟನೆ ಸಂಭವಿಸಿದೆ. ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ, ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ. ನನ್ನ ಮತ್ತು ಅಕ್ಷತಾ ಅವರ ಹೃದಯಗಳು ಬೆಂಗಳೂರಿನ ದುರಂತ ಘಟನೆಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಮತ್ತು ಗಾಯಗೊಂಡವರೊಂದಿಗೆ ಇದೆ. ನಿನ್ನೆ ನಿಮ್ಮೊಂದಿಗೆ ನಾವು ಸಂಭ್ರಮಿಸಿದೆವು ಮತ್ತು ಇಂದು ನಿಮ್ಮೊಂದಿಗೆ ದುಃಖಿಸುತ್ತಿದ್ದೇವೆ ಎಂದು ಸುನಕ್ ತಮ್ಮ ಟ್ವೀಟ್ಟರ್ ಪೋಸ್ಟ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಆರ್ಸಿಬಿಯೊಂದಿಗೆ ಭಾವನಾತ್ಮಕ ಸಂಬಂಧಹೊಂದಿರುವ ಸುನಕ್..
ಇನ್ನೂ ಸುನಕ್ ಅವರು ಬೆಂಗಳೂರಿನ ಅಳಿಯನಾದ ಬಳಿಕ ಆರ್‌ಸಿಬಿ ತಂಡದೊಂಡಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವನ್ನು ಬೆಂಬಲಿಸಲು ಹಾಜರಿದ್ದರು. ಬೆಂಗಳೂರು ತಂಡವು 18 ವರ್ಷಗಳ ಕಾಲದ ತಪಸ್ಸಿನ ನಂತರ ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತ್ತು. ಈ ಕ್ಷಣವನ್ನೂ ಸಹ ಸುನಕ್ ತೀರ ಹತ್ತಿರದಿಂದಲೇ ಕಂಡು ಸಂತಸ ಪಟ್ಟಿದ್ದರು.
ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ..
ಈ ಸಂಭ್ರಮವನ್ನು ಆಚರಿಸಲು ನಿರೀಕ್ಷೆಗೂ ಮೀರಿ ಜನ ಸೇರಿ ದುರಂತ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ನೂಕುನುಗ್ಗಲಿನಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ.
ನೂಕುನುಗ್ಗಲಿನಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ..!
ಗೆಲುವಿನ ಸಂಭ್ರಮಾಚರಣೆಯ ವೇಳೆ ಒಂದು ದೊಡ್ಡ ದುರಂತ ಸಂಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇದು ಸಂಭವಿಸಿದೆ ಎಂದು, ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ನೂಕುನುಗ್ಗಲಿನಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಮತ್ತು 47 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ಸಂಭವಿಸಬಾರದಿತ್ತು. ಸರ್ಕಾರ ಈ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಇಷ್ಟೊಂದು ದೊಡ್ಡ ಜನಸಂದಣಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ..
ಅಲ್ಲದೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸುತ್ತೇನೆ. ನಾನು ಈ ಘಟನೆಯನ್ನು ಸಮರ್ಥಿಸಿಕೊಳ್ಳಲು ಬಯಸುವುದಿಲ್ಲ. ನಮ್ಮ ಸರ್ಕಾರ ಇದರ ಮೇಲೆ ರಾಜಕೀಯ ಮಾಡುವುದಿಲ್ಲ. ನಾನು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದೇನೆ ಮತ್ತು 15 ದಿನಗಳ ಕಾಲಾವಕಾಶ ನೀಡಿದ್ದೇನೆ. ಜನರು ಕ್ರೀಡಾಂಗಣದ ದ್ವಾರಗಳನ್ನು ಸಹ ಮುರಿದರು. ನೂಕುನುಗ್ಗಲು ಉಂಟಾಯಿತು. ಇಷ್ಟೊಂದು ದೊಡ್ಡ ಜನಸಂದಣಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದಲ್ಲಿ ಕೇವಲ 35,000 ಜನರಿಗೆ ಮಾತ್ರ ಸ್ಥಳಾವಕಾಶವಿದೆ, ಆದರೆ 2-3 ಲಕ್ಷ ಜನರು ಬಂದರು ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸೇರಿ ಹಲವಾರು ನಾಯಕರು, ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ಸೆಲೆಬ್ರಿಟಿಗಳು ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯವು ನಡೆಯುತ್ತಿರುವುದು ಮಾತ್ರ ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.