ಬೆಂಗಳೂರು: ಕಾಂಗ್ರೆಸ್ ಸರ್ಕಾರಾವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿರೋ ಬಿಜೆಪಿ ಸರ್ಕಾರದ ವಿರುದ್ಧ ಜಮೀರ್ ಅಹಮದ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರದ್ದುಗೊಳಿಸಿದ್ರೇನಂತೆ, ನಾವು ಅದಕ್ಕಿಂತ ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಿಸ್ತೇವೆ, ಇದನ್ನು ಯಾರಿಂದಲೂ ತಡಯೋಕೆ ಸಾಧ್ಯವಿಲ್ಲ ಅಂತ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಟಿಪ್ಪು ಜಯಂತಿ ರದ್ದುಗೊಳಿಸಿ ಆದೇಶ ಹೊರಡಿಸಿರೋ ಸಿಎಂ ಯಡಿಯೂರಪ್ಪ ನಡೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಜಮೀರ್ ಅಹಮದ್, ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದುಗೊಳಿಸುತ್ತೆ ಅಂತ ಗೊತ್ತಿತ್ತು, ಆದ್ರೆ ಇಷ್ಟು ಅವಸರವಾಗಿ ಈ ಆದೇಶ ಹೊರಡಿಸುತ್ತಾರೆ ಅಂತ ಗೊತ್ತಿರಲಿಲ್ಲ. ಒಂದು ಸರ್ಕಾರಿ ಆಚರಣೆಯನ್ನು ಈ ರೀತಿ ರದ್ದುಗೊಳಿಸಬೇಕಾದ್ರೆ ಆ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಬೇಕು. ಇದ್ಯಾವುದನ್ನೂ ಮಾಡದೆ ಯಡಿಯೂರಪ್ಪ ಹೇಗೆ ಈ ನಿರ್ಧಾರ ಕೈಗೊಂಡರು ಅಂತ ಜಮೀರ್ ಅಹಮದ್ ಅಸಮಾಧಾನ ವ್ಯಕ್ತಪಡಿಸಿದ್ರು. ಇನ್ನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ರೋಷನ್ ಬೇಗ್ ಈ ಕುರಿತು ಉತ್ತರ ನೀಡಬೇಕು ಅಂತ ಜಮೀರ್ ಇದೇ ವೇಳೆ ತಾಕೀತು ಮಾಡಿದ್ರು.
ಬಳಿಕ ಮಾತನಾಡಿದ ಜಮೀರ್ ಅಹಮದ್ ಖಾನ್, 2016ರಲ್ಲಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಘೋಷಿಸೋದಕ್ಕೂ ಮುನ್ನವೇ ದೇಶಾದ್ಯಂತ ಆಚರಿಸಿಕೊಂಡು ಬರಲಾಗ್ತಿದೆ. ಇನ್ನು ಮುಂದೆಯೂ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತೇವೆ, ಅದನ್ನು ಯಾವ ಬಿಜೆಪಿಯವರಿಂದಲೂ ಸಾಧ್ಯವಿಲ್ಲ, ಯಾರಿಂದಲೂ ಸಾಧ್ಯವಿಲ್ಲ ಅಂತ ತೀವ್ರ ಆಕ್ರೋಶ ಹೊರಹಾಕಿದ್ರು.