Sunday, January 12, 2025

Latest Posts

ಕಾಂಗ್ರೆಸ್‌ನಿಂದ ರಕ್ಷಣೆ ಸಿಗುತ್ತದೆ ಎಂದು ನಿರೀಕ್ಷಿಸುವುದು “ಮಾರ್ಜಾಲ ನ್ಯಾಯದಂತಾಗುತ್ತದೆ”: ವಿಜಯೇಂದ್ರ

- Advertisement -

Political News: ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಅವರ ಪುತ್ರನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಮ್ಮ ಪಕ್ಷದ ಪ್ರಮುಖರಾದ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರ ಮೇಲೆ ಪ್ರಜಾಪ್ರಭುತ್ವವನ್ನು ನಾಚಿಸುವ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಗೆ ಯತ್ನ ನಡೆಯಿತು. ಅದರ ನಂತರವೂ ಅವರ ವಿರುದ್ಧ ನಿರಂತರ ಬೆದರಿಕೆ ಒಡ್ಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ನಿನ್ನೆ ಅವರಿಗೆ ಬೆದರಿಕೆ ಪತ್ರ ರವಾನೆಯಾಗಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಸಿಟಿ ರವಿ ಅವರನ್ನು ಗುರಿಯನ್ನಾಗಿಸಿಕೊಂಡಿರುವ ದುಷ್ಕರ್ಮಿಗಳು ಅವರ ವಿರುದ್ಧ ವ್ಯೂಹ ರಚಿಸಿರುವ ಸಾಧ್ಯತೆಯನ್ನು ಅವರಿಗೆ ಬಂದಿರುವ ಬೆದರಿಕೆಯ ಸಂದೇಶಗಳ ಹಿನ್ನೆಲೆಯಲ್ಲಿ ತಳ್ಳಿ ಹಾಕಲಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ನಿರೀಕ್ಷಿಸುವುದು “ಮಾರ್ಜಾಲ ನ್ಯಾಯದಂತಾಗುತ್ತದೆ” ಎಂದು ವಿಜಯೇಂದ್ರ ಹೇಳಿದ್ದಾರೆ.

ಸಿ.ಟಿ.ರವಿ ಅವರಿಗೆ ಬೆದರಿಕೆ ಒಡ್ಡಲಾಗುತ್ತಿರುವ ಶಕ್ತಿಗಳು ಯಾವುದು ಎಂಬುದು ಸರ್ಕಾರ ಹಾಗೂ ಪೊಲೀಸರಿಗೆ ತಿಳಿದೇ ಇದೆ, ಇಷ್ಟಾಗಿಯೂ ದುಷ್ಟ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಏಕೆಂದರೆ ಅವರು ಕಾಂಗ್ರೆಸ್ ಪಕ್ಷದ ಭಾಗವೇ ಆಗಿದ್ದಾರೆ ಎಂಬುದು ಬಹಿರಂಗ ಸತ್ಯ. ಈ ನಿಟ್ಟಿನಲ್ಲಿ ಸಿಟಿ ರವಿ ಅವರ ರಕ್ಷಣೆಗೆ ವಿಶೇಷ ಭದ್ರತೆ ಒದಗಿಸಲು ಒತ್ತಾಯಿಸುವೆ. ಶಾಸಕ ಸಿಟಿ ರವಿ ಅವರು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಇಂತಹ ಬೆದರಿಕೆ, ದೌರ್ಜನ್ಯಗಳು ಮುಂದುವರೆದಲ್ಲಿ ಬಿಜೆಪಿ ಅದನ್ನು ಸವಾಲಾಗಿ ಸ್ವೀಕರಿಸಿ ಹೋರಾಡಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

- Advertisement -

Latest Posts

Don't Miss