ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆ ವಿಧಾನಗಳ ಮೂಲಕ ಕಟ್ಟುನಿಟ್ಟಾಗಿ ವ್ಯವಹರಿಸುವುದನ್ನು ಭಾರತ ಮುಂದುವರಿಸುತ್ತದೆ. ಈ ವಿಷಯದಲ್ಲಿ ಯಾವುದೇ ಗೊಂದಲಬೇಡ. ಅಲ್ಲದೆ ಭಾರತವು ಯಾವುದೇ ಕಾರಣಕ್ಕೂ ಪಾಕಿಸ್ತಾನದ ‘ಪರಮಾಣು ಬೆದರಿಕೆ’ಗೆ ಮಣಿಯುವುದಿಲ್ಲ, ತನ್ನಲ್ಲಿಯ ಉಗ್ರರ ಪೋಷಣೆಯನ್ನು ಬಿಡಬೇಕು. ಇಲ್ಲವಾದರೆ ನಮ್ಮ ಆಪರೇಷನ್ ಸಿಂಧೂರ್ ಮತ್ತೆ ಆಕ್ಟೀವ್ ಆಗುತ್ತದೆ ಎಂದು ವಿದೇಶಾಂಗ ಇಲಾಖೆಯ ಸಚಿವ ಎಸ್.ಜೈಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಾರತ ಶೂನ್ಯ ಸಹಿಷ್ಣುತಾ ನೀತಿಯನ್ನು ತಾಳಿದೆ..
ವಿದೇಶಗಳ ಪ್ರವಾಸದಲ್ಲಿರುವ ಅವರು ಬರ್ಲಿನ್‌ನಲ್ಲಿ ಜರ್ಮನ್ ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭಯೋತ್ಪಾದನೆಯ ವಿರುದ್ಧ ಭಾರತ ಶೂನ್ಯ ಸಹಿಷ್ಣುತಾ ನೀತಿಯನ್ನು ತಾಳಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ತನ್ನದೇ ಆದ ಕಾರ್ಯಾಚರಣೆಯ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ. ಭಾರತ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಭಾರತ ಎಂದಿಗೂ ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಮತ್ತು ಭಾರತ ಪಾಕಿಸ್ತಾನದೊಂದಿಗೆ ಸಂಪೂರ್ಣವಾಗಿ ದ್ವಿಪಕ್ಷೀಯವಾಗಿ ವ್ಯವಹರಿಸುತ್ತದೆ. ಆ ವಿಷಯದಲ್ಲಿ ಯಾವುದೇ ಭಾಗದಲ್ಲಿ ಯಾವುದೇ ಗೊಂದಲ ಇರಬಾರದು. ಭಯೋತ್ಪಾದನೆಯ ವಿರುದ್ಧ ಪ್ರತಿಯೊಂದು ರಾಷ್ಟ್ರವೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂಬ ಜರ್ಮನಿಯ ತಿಳುವಳಿಕೆಯನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ನಾಗರಿಕರ ಮೇಲಿನ ಈ ದಾಳಿಯನ್ನು ನಾವು ತೀವ್ರವಾಗಿ ಖಂಡಿಸಿದ್ದೇವೆ..
ಇನ್ನೂ ಈ ವೇಳೆ ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ವಾಡೆಫುಲ್ ನಿರಾಶೆ ವ್ಯಕ್ತಪಡಿಸಿದ್ದು, ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಪ್ರತಿಯೊಂದು ರಾಷ್ಟ್ರಕ್ಕಿದೆ. ಅದರಂತೆ ಭಾರತವು ತನ್ನ ಕ್ರಮ ಕೈಗೊಂಡಿದೆ. ಏಪ್ರಿಲ್ 22 ರಂದು ಭಾರತದ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯಿಂದ ನಾವು ದಿಗ್ಭ್ರಮೆಗೊಂಡಿದ್ದೇವೆ. ನಾಗರಿಕರ ಮೇಲಿನ ಈ ದಾಳಿಯನ್ನು ನಾವು ತೀವ್ರವಾಗಿ ಖಂಡಿಸಿದ್ದೇವೆ. ಎಲ್ಲಾ ಅಮಾಯಕ ಜೀವಗಳ ಮತ್ತು ಅವರ ಕುಟುಂಬಗಳಿಗೆ ನಾವು ಸಂತಾಪಗಳನ್ನು ತಿಳಿಸುತ್ತೇವೆ. ಎರಡೂ ಕಡೆಯ ಮಿಲಿಟರಿ ದಾಳಿಗಳ ನಂತರ, ಭಾರತವು ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕನ್ನು ಹೊಂದಿದೆ ವಾಡೆಫುಲ್ ಅವರು ಭಾರತದ ನಿಲುವನ್ನು ಸ್ವಾಗತಿಸಿದ್ದಾರೆ.
ಜರ್ಮನಿ – ಭಾರತದ ನಡುವೆ ಸಂಬಂಧ ಗಟ್ಟಿಯಾಗಿದೆ..
ಅಲ್ಲದೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆ ಮತ್ತು ದ್ವಿಪಕ್ಷೀಯ ಪರಿಹಾರಕ್ಕಾಗಿ ಕದನ ವಿರಾಮವನ್ನು ಕಾಯ್ದುಕೊಳ್ಳಬೇಕು. ಈಗ ಕದನ ವಿರಾಮ ಜಾರಿಯಲ್ಲಿದೆ ಎಂಬುದು ನಮಗೆ ತುಂಬಾ ಮೆಚ್ಚುಗೆಯ ಸಂಗತಿ. ಪ್ರಮುಖವಾಗಿ ಈಗ ಕದನ ವಿರಾಮ ಸ್ಥಿರವಾಗಿರಬೇಕಾಗಿರುವುದು ಮತ್ತು ಎರಡೂ ಕಡೆಯ ಮುಖ್ಯವಾದ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಆ ಸಂಘರ್ಷಕ್ಕೆ ದ್ವಿಪಕ್ಷೀಯ ಪರಿಹಾರಗಳನ್ನು ಕಂಡುಕೊಳ್ಳುವ ಸಲುವಾಗಿ ಮಾತುಕತೆ ನಡೆಯಬಹುದು. ಜರ್ಮನಿ ಮತ್ತು ಭಾರತ ವರ್ಷಗಳಿಂದ ಭಯೋತ್ಪಾದನೆಯ ವಿರುದ್ಧದ ಹೋರಾಟದ ಕುರಿತು ನಿರಂತರ ಮಾತುಕತೆ ನಡೆಸುತ್ತಲೇ ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಸಮಾನ ಮನಸ್ಕರಾಗಿ ಹೋರಾಡುವ ತೀರ್ಮಾನ..
ಅಲ್ಲದೆ ನಾವು ಉಭಯ ರಾಷ್ಟ್ರಗಳ ನಡುವಿನ ಭಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಿದ್ಧರಾಗಿದ್ದೇವೆ ಎಂದು ಜರ್ಮನಿಯ ಸಚಿವರು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭಾರತದ ನಿಲುವನ್ನು ಸಮರ್ಥಿಸಿಕೊಂಡಿದ್ದರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಉಗ್ರವಾದವನ್ನು ತೊಡೆದು ಹಾಕಲು ಎರಡೂ ದೇಶಗಳು ಸಮಾನ ಮನಸ್ಕರಾಗಿ ಹೋರಾಡುವ ತೀರ್ಮಾನ ಮಾಡಲಾಗಿದೆ.
ಉಗ್ರವಾದ ನಿಲ್ಲದ ಹೊರತು ಮಾತಿಲ್ಲ..
ಇನ್ನೂ ಇದಕ್ಕೂ ಮುನ್ನ ನೆದರ್ಲೆಂಡ್ಸ್ ಪ್ರವಾಸದಲ್ಲಿದ್ದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜೈಶಂಕರ್, ನಮ್ಮ ನೆಲದಲ್ಲಿ ಯಾವುದೇ ಉಗ್ರರು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂಬ ಪಾಕಿಸ್ತಾನದ ಹಸಿಹಸಿ ಸುಳ್ಳಿನ ನಾಟಕ ಬಹುದಿನಗಳ ಹಿಂದೆಯೇ ಬಯಲಾಗಿದೆ. ಸರಕಾರ ಹಾಗೂ ಸೇನೆಯೇ ನೇರವಾಗಿ ಉಗ್ರ ಕೃತ್ಯಗಳಲ್ಲಿ ಭಾಗಿಯಾಗುತ್ತಿವೆ ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಪಾಕಿಸ್ತಾನ ಸುಳ್ಳು ಹೇಳುತ್ತಿದೆ. ಅಲ್ಲದೆ ವಿಶ್ವಸಂಸ್ಥೆ ಉಗ್ರರೆಂದು ಘೋಷಿಸಿರುವ ಬಹುತೇಕ ವ್ಯಕ್ತಿಗಳು, ನಿಷೇಧಿತ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ. ಅವರೆಲ್ಲ ದೊಡ್ಡ ದೊಡ್ಡ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹು ಮುಖ್ಯವಾಗಿ ಉಗ್ರ ಸಂಘಟನೆಗಳ ಸಂಪೂರ್ಣ ವಿವರ ಪಾಕಿಸ್ತಾನ ಸರ್ಕಾರದ ಬಳಿ ಇದೆ. ಇವರೆಲ್ಲ ಪರಸ್ಪರ ಸಂಪರ್ಕದಲ್ಲಿದ್ದುಕೊಂಡೇ ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ನಮ್ಮ ಕಾಶ್ಮೀರದ ಭಾಗ ಪಿಒಕೆಯನ್ನು ಬಿಟ್ಟು ಮೊದಲು ತೊಲಗಬೇಕು. ಅಂದಾಗ ಮಾತ್ರ ಅದರೊಟ್ಟಿಗೆ ಮಾತುಕತೆ ನಡೆಯುತ್ತದೆ, ಅಲ್ಲಿಯವರೆಗೂ ಏನೂ ನಡೆಯುವುದಿಲ್ಲ. ಈ ಭಯೋತ್ಪಾದನೆ ನಿಲ್ಲದ ಹೊರತು ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ. ಇನ್ನು ಮುಂದೆ ಭಾರತದ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕೈ ಹಾಕಿದರೆ ಅದರ ಪರಿಣಾಮಗಳು ಘೋರಾತಿಘೋರವಾಗಿರುತ್ತವೆ ಎಂದು ಪಾಕ್‌ಗೆ ಜೈಶಂಕರ್ ತೀಕ್ಷ್ಣವಾದ ಎಚ್ಚರಿಕೆ ನೀಡಿದ್ದಾರೆ.