Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿಂದು ಅದ್ಧೂರಿ ವಿವಾಹ ನೆರವೇರಿದ್ದು, ರಶ್ಮಿಕಾ ಅವರ ಜೊತೆ ಜಯಪ್ರಕಾಶ್ ಸಪ್ತಪದಿ ತುಳಿದಿದ್ದಾರೆ.
ಕಳೆದ ವರ್ಷ ಸು ಫ್ರಮ್ ಸೋ ಎಂಬ ಸಿನಿಮಾ ಸಿಂಪಲ್ ಆಗಿ ಥಿಯೇಟರ್ಗೆ ಕಾಲಿಟ್ಟಿತ್ತು. ಅದಕ್ಕೂ ಮುನ್ನ ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದ್ದು, ಟ್ರೇಲರ್ ನೋಡಿಯೇ ಅರ್ಧ ಜನ ಥಿಯೇಟರ್ಗೆ ಹೋಗಿದ್ದರು. ಬಳಿಕ ಬಾಯಿಂದ ಬಾಯಿಗೆ ಸಿನಿಮಾದ ಬಗ್ಗೆ ಶ್ಲಾಘನೆ ಹರಡಿ, ವಾರದ ದಿನಗಳಲ್ಲೂ ಥಿಯೇಟರ್ ಫುಲ್ ಆಗಿತ್ತು. ಅದಾದ ಬಳಿಕ ಸು ಫ್ರಮ್ ಸೋ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಾಡಾಯಿತು. ಅಲ್ಲಿಗೆ ಜೆ.ಪಿ.ತುಮಿನಾಡು ಪ್ಯಾನ್ ಇಂಡಿಯಾ ನಟ, ನಿರ್ದೇಶಕರಾದ್ರು.
ಇದೀಗ ಜೆಪಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು, ಮಂಗಳೂರಿನ ಪಿಲಿಕುಳದ ಸ್ಕೌಟ್ ಭವನದಲ್ಲಿ ಅದ್ಧೂರಿ ವಿವಾಹ ಸಮಾರಂಭ ನೆರವೇರಿದೆ. ವಿವಾಹಕ್ಕೆ ರಾಜ್.ಬಿ.ಶೆಟ್ಟಿ, ರೂಪೇಶ್ ಶೆಟ್ಟಿ ಸೇರಿ ಹಲವು ಸೆಲೆಬ್ರಿಟಿಗಳು ಬಂದು ದಂಪತಿಗಳನ್ನು ಹಾರೈಸಿದ್ದಾರೆ. ಅಲ್ಲದೇ, ಸು ಫ್ರಮ್ ಸೋ ತಂಡ ಕೂಡ ಹಳದಿ,ಸಂಗೀತ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕುಣಿದು ಕುಪ್ಪಳಿಸಿದೆ.
ಜೆಪಿ 14 ವರ್ಷಗಳ ಕಾಲ ರಂಗಭೂಮಿಯಲ್ಲಿ ನಟನೆ, ನಿರ್ದೇಶನ ಮಾಡಿದ್ದು, ಕನ್ನಡ ಸಿನಿಮಾಗಳಾದ ಸಪ್ತಸಾಗರದಾಚೆ ಎಲ್ಲೋ ಸೈಡ್ 1 ಮತ್ತು ಸೈಡ್ 2ರಲ್ಲಿ, ಗರುಡ ಗಮನ ವೃಷಭ ವಾಹನ, ಒಂದು ಮೊಟ್ಟೆಯ ಕಥೆ, ಸ್ವಾತಿ ಮುತ್ತಿನ ಮಳೆ ಹನಿಯೇ, ಸು ಫ್ರಮ್ ಸೋ, ಕಟ್ಟೆಮಾರ್ ಸಿನಿಮಾದಲ್ಲಿ ನಟಿಸಿದ್ದಾರೆ.




