ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್, ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿ ಆಯ್ತು. ಒಂದುಕಡೆ ಆಂಗ್ಲರ ನಾಲ್ಕು ದಶಕಗಳ ಕನಸು ನನಸಾಗಿದ್ರೆ, ಮತ್ತೊಂದು ಕಡೆ ವರ್ಲ್ಡ್ ಕಪ್ ಇತಿಹಾಸದಲ್ಲೇ ಇದೇ ಮೊದಲ ಸಲ, ಹಿಂದೆಂದೂ ಕಂಡರಿಯದಂತಹ ರೋಚಕ ಪಂದ್ಯಕ್ಕೆ ಈ ಬಾರಿಯ ವಿಶ್ವಕಪ್ ಸಾಕ್ಷಿಯಾಯಿತು.
ಹೌದು.. ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪಂದ್ಯ ಒಂದು ಸೂಪರ್ ಓವರ್ ನಲ್ಲಿ ಅಂತ್ಯವಾಯಿತು. ಈ ಮೂಲಕ 12ನೇ ವಿಶ್ವಕಪ್ ಟೂರ್ನಿ ಇತಿಹಾಸ ಪುಟಗಳಲ್ಲಿ ದಾಖಲಾಯಿತು. ಮತ್ತೊಂದೆಡೆ ಜಗತ್ತಿಗೆ ಕ್ರಿಕೆಟ್ ಕಲಿಸಿಕೊಟ್ಟ ಆಂಗ್ಲ ಪಡೆ, ಕಡೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ್ರು. ಲಾರ್ಡ್ಸ್ ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್, ಮೂದಲು ಬ್ಯಾಟಿಂಗ್ ಆರಂಭಿಸಿತು. ನಿರೀಕ್ಷಿತ ದೊಡ್ಡ ಮೂತ್ತ ಕಲೆ ಹಾಕುವಲ್ಲಿ ವಿಫಲವಾದ ವಿಲಿಯಮ್ಸನ್ ಬಳಗ, ಹೆನ್ರಿ ನಿಕೋಲ್ಸ್ ಸಿಡಿಸಿದ ಅರ್ಧ ಶತಕದ ಬಲದಿಂದ 8 ವಿಕೆಟ್ ಕಳೆದುಕೊಂಡು 241 ರನ್ ಗಳ ಸವಾಲಿನ ಮೊತ್ತ ಕಲೆ ಹಾಕಿತು.
ನಂತರ ಗುರಿ ಬೆನ್ನತ್ತಿದ ಇಂಗ್ಲೆಂಡ್, 86 ರನ್ ಗಳಿಸುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಈ ವೇಳೆ 5 ನೇ ವಿಕೆಟಿಗೆ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ಶತಕದ ಜೊತೆಯಾಟ ಆಡುವ ಮೂಲಕ ಗೆಲುವಿನ ನಿರೀಕ್ಷೆ ಮೂಡಿಸಿದ್ರು. ಈ ನಡುವೆ ತಂಡ 196 ರನ್ ಗಳಿಸಿದ್ದಾಗ, 59 ರನ್ ಗಳಿಸಿದ್ದ ಬಟ್ಲರ್, ಪೆವಿಲಿಯನ್ ಸೇರಿದ್ರು. ಇಲ್ಲಿಂದ ಪಂದ್ಯ ನಾಟಕೀಯ ರೀತಿಯಲ್ಲಿ ತಿರುವು ಪಡೆದುಕೊಂಡಿತು. ಈ ವೇಳೆ ಮತ್ತೆ ಫೈಟ್ ಬ್ಯಾಕ್ ಮಾಡಿದ ಬ್ಲಾಕ್ ಕ್ಯಾಪ್ಸ್, ಇಂಗ್ಲೆಂಡ್ ಅಂಗಳದಲ್ಲಿದ್ದ ಗೆಲುವನ್ನ ಕಿತ್ತುಕೊಳ್ಳಲು ಮುಂದಾದ್ರು.
ಇದರ ನಡುವೆ ನಿರ್ಣಾಯಕ ಹಂತದಲ್ಲಿ ಮಾಡಿಕೊಂಡ ಒಂದೆರಡು ಎಡವಟ್ಟುಗಳು ಕಿವೀಸ್ ಪಡೆಗೆ ಮೂಳುವಾದವು. ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೋರಾಟಕ್ಕೆ ಅದೃಷ್ಟದ ಬಲವೂ ಇತ್ತು. 49ನೇ ಓವರ್ ನಲ್ಲಿ ಕಿವೀಸ್ ತಂಡದ ಟ್ರೆಂಟ್ ಬೌಲ್ಟ್, ಲಾಂಗ್ ಆನ್ ನಲ್ಲಿ ಅತ್ಯದ್ಭುತ ಕ್ಯಾಚ್ ಏನೋ ಪಡೆಯುವಲ್ಲಿ ಯಶಸ್ವಿಯಾದ್ರು, ಆದ್ರೆ ಬೌಂಡರಿ ಗೆರೆ ಬಳಿ ಬ್ಯಾಲೆನ್ಸ್ ತಪ್ಪಿದ ಬೌಲ್ಟ್, ಚೆಂಡು ತಮ್ಮ ಕೈಯಲ್ಲಿರುವಾಗಲೇ ಬೌಂಡರಿ ಲೈನ್ ಹೊರಗೆ ಕಾಲಿಟ್ಟರು. ಪರಿಣಾಮವಾಗಿ ಇಂಗ್ಲೆಂಡ್ ಖಾತೆಗೆ ಆರು ರನ್ ಸೇರಿದ್ದಲ್ಲದೆ, ಬೆನ್ ಸ್ಟೋಕ್ಸ್ ಜೀವದಾನ ಪಡೆದರು. ಆದರು ಛಲ ಬಿಡದ ಕಿವೀಸ್ ಪಡೆ, ಅಂತಿಮ ಓವರ್ ನಲ್ಲಿ ಎರಡು ರನ್ ಔಟ್ ಮಾಡುವ ಮೂಲಕ 241 ರನ್ ಗಳಿಗೆ ಇಂಗ್ಲೆಂಡ್ ತಂಡವನ್ನ ಆಲ್ ಔಟ್ ಮಾಡಿದ್ರು. ಪರಿಣಾಮವಾಗಿ ಪಂದ್ಯ ಟೈ ಆಯಿತು.
ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಆಂಗ್ಲ ಪಡೆ
ಕಿವೀಸ್ ಪರ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿದ ಬೌಲ್ಟ್ ಎಸೆತದಲ್ಲಿ, ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ 15 ರನ್ ಕಲೆ ಹಾಕಿದ್ದರು. 16 ರನ್ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿದ ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ ಮತ್ತು ಜಿಮ್ಮಿ ನಿಜಾಮ್ ಜೋಡಿ 15 ರನ್ ಕಲೆಹಾಕಿದ್ರು. ಅಂತಿಮ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿ ಗಪ್ಟಿಲ್ ರನ್ ಔಟ್ ಆದ್ರು. ಪರಿಣಾಮವಾಗಿ ಸೂಪರ್ ಓವರ್ ನಲ್ಲಿ ಗೆದ್ದ ಇಂಗ್ಲೆಂಡ್ ವಿಶ್ವಕಪ್ ಕಪ್ ಇತಿಹಾಸದ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿತು.