Thursday, December 26, 2024

Latest Posts

ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ದುಪ್ಪಟ್ಟು; ಪ್ರತಿ ಕೆಜಿಗೆ 785 ರೂ.!

- Advertisement -

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ಒಂದು ಕೆಜಿ 785 ರೂಪಾಯಿಗೆ ತಲುಪಿದ್ದು, ಆ ಮೂಲಕ ರೇಷ್ಮೆ ಬೆಳಗಾರರ ಮೊಗದಲ್ಲಿ ಸಂತಸ ಮೂಡಿದೆ.

ಹೌದು ಈ ಹಿಂದೆ 300 ರೂಪಾಯಿ ಆಸುಪಾಸಿನಲ್ಲಿದ್ದ ಒಂದು ಕೆಜಿ ರೇಷ್ಮೆ ಗೂಡಿನ ದರ ಕೊರೋನಾ ಮಹಾಮಾರಿ ಹೊಡೆತಕ್ಕೆ ಸಿಲುಕಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು.

ಕೊರೋನಾ ಸಂದರ್ಭದಲ್ಲಿ ಡೀಲರ್‌ಗಳು ರೇಷ್ಮೆ ಗೂಡು ಖರೀದಿಸದ ಹಿನ್ನೆಲೆಯಲ್ಲಿ ರೇಷ್ಮೆ ದರ ಕುಸಿದಿತ್ತು. ಇವೆಲ್ಲದರ ಜೊತೆಗೆ ರೇಷ್ಮೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಯಿಂದಾಗಿ ಸೂಕ್ತ ದರ ಸಿಗದೇ ರೇಷ್ಮೆ ಬೆಳೆಗಾರರು ವಂಚನೆಗೊಳಗಾಗುತ್ತಿದ್ದರು.

ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ರೇಷ್ಮೆ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡು ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರ ಹೊಲಗಳಿಗೆ ಹೋಗಿ ರೇಷ್ಮೆ ಬೆಳೆಗಾರರ ಜೊತೆ ಸಂವಾದ ನಡೆಸಿದ ಸಂದರ್ಭದಲ್ಲಿ ರೇಷ್ಮೆ ಮಾರುಕಟ್ಟೆಗಳಲ್ಲಿ ರೈತರಿಗೆ ಆಗುತ್ತಿದ್ದ ಅನ್ಯಾಯ, ದಲ್ಲಾಳಿಗಳ ಕಿರುಕುಳ, ಮೋಸ ಸೇರಿದಂತೆ ತಮಗಾಗುತ್ತಿದ್ದ ಸಮಸ್ಯೆ ಬಗ್ಗೆ ರೇಷ್ಮೆ ಬೆಳೆಗಾರರು ಸಚಿವರ ಗಮನಕ್ಕೆ ತಂದಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು ರೇಷ್ಮೆ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿದ್ರು. ರೇಷ್ಮೆ ಗೂಡಿಗೆ ಹೆಚ್ಚಿನ ದರ ಸಿಗದಂತೆ ನಿಯಂತ್ರಿಸುತ್ತಿದ್ದ ದಲ್ಲಾಳಿಗಳ ಕಡಿವಾಣಕ್ಕೆ ಸಚಿವ ಡಾ.ನಾರಾಯಣಗೌಡ ದಿಟ್ಟ ಕ್ರಮಗಳನ್ನು ತೆಗೆದುಕೊಂಡರು. ಕೆಲವು ಸಿಬ್ಬಂದಿಯ ಕುಮ್ಮಕ್ಕಿನಿಂದ ಅವ್ಯವಹಾರಗಳು ನಡೆಸುತ್ತಿದ್ದ ದಲ್ಲಾಳಿಗಳಿಗೆ ಸಚಿವರು ಎಚ್ಚರಿಕೆ ನೀಡಿ ಕಡಿವಾಣ ಹಾಕಿ, ರೇಷ್ಮೆ ಗೂಡು ಕಳ್ಳತನ ತಪ್ಪಿಸಲು ರೇಷ್ಮೆ ಮಾರುಕಟ್ಟೆಯಲ್ಲಿ ಸಿಸಿಟಿವಿ ಅಳವಡಿಸುವ ಕ್ರಮಕೈಗೊಂಡು, ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅಕ್ರಮಗಳು ನಡೆಯದಂತೆ ಕ್ರಮ ತೆಗೆದುಕೊಂಡಿದ್ದರು.

ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆಗೆ ತೆರಳುವಾಗ ಪೊಲೀಸರು ಹಾಗೂ ಹಲವರಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಲು ವಿಶೇಷ ಗುರುತಿನ ಚೀಟಿ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡು, ರಾಜ್ಯಾದ್ಯಂತ 1.38 ಲಕ್ಷ ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಭ್ರಷ್ಟಾಚಾರ ಹಾಗೂ ಅವ್ಯವಹಾರ ತಡೆಗಟ್ಟಲು ಇ – ಪೇಮೆಂಟ್ ಜಾರಿಗೆ ತರಲಾಗಿದೆ. ರೇಷ್ಮೆ ಗೂಡು ಮಾರಾಟಕ್ಕೆ ತೊಂದರೆ ಆಗದಂತೆ ರೇಷ್ಮೆ ಮಾರುಕಟ್ಟೆಗಳನ್ನು ವಿಸ್ತರಣೆಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದರ ಜೊತೆಗೆ ರೇಷ್ಮೆ ಬೆಳೆಗಾರರ ಜೊತೆ ಅವರ ಹೊಲದಲ್ಲೇ ಸಂವಾದ ನಡೆಸುವ ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಸಚಿವ ಡಾ. ನಾರಾಯಣಗೌಡ ಅವರ ಈ ಎಲ್ಲಾ ದಿಟ್ಟ ಕ್ರಮಗಳಿಂದಾಗಿ ರೇಷ್ಮೆ ಬೆಳೆಗಾರರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಕೆಜಿ ರೇಷ್ಮೆ ಗೂಡು 785 ರೂಪಾಯಿ ಮುಟ್ಟಿದೆ. ಇದರ ಜೊತೆಗೆ ರೇಷ್ಮೆ ದರ ಸರಾಸರಿ ಕಳೆದ ವರ್ಷಕ್ಕಿಂತ ಡಬಲ್ ಆಗಿದೆ. 2020-21 ನೇ ಸಾಲಿನಲ್ಲಿ ಪ್ರತಿ ಕೆಜಿ ರೇಷ್ಮೆ ಗೂಡಿಗೆ ಸರಾಸರಿ 300 ರೂಪಾಯಿ ಇತ್ತು. ಆದರೆ, ಪ್ರಸಕ್ತ ಸಾಲು ಅಂದರೇ 2021-22 ನೇ ಸಾಲಿನಲ್ಲಿ ಪ್ರತಿ ಕೆಜಿಗೆ ಸರಾಸರಿ 500 ರೂ.ನಷ್ಟಿದೆ.

ರೇಷ್ಮೆ ಗೂಡಿನಲ್ಲಿ ಮಿಶ್ರತಳಿ, ದ್ವಿತಳಿ ಎಂಬ ಎರಡು ರೀತಿಯಿದ್ದು ರಾಮನಗರ, ಶಿಡ್ಲಘಟ್ಟದಲ್ಲಿ ದ್ವಿತಳಿ ರೇಷ್ಮೆ ಗೂಡು ಗರಿಷ್ಠ ದರ ತಲುಪಿರುವ ಮಾಹಿತಿ.
25-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 785 ರೂ.
10-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 710 ರೂ.
14-11-2021- ರಾಮನಗರ ಗರಿಷ್ಠ – ಒಂದು ಕೆಜಿಗೆ 700 ರೂ.

- Advertisement -

Latest Posts

Don't Miss