Wednesday, March 19, 2025

Latest Posts

ಬಿಡದಿ ಟೌನ್‌ ಶಿಪ್‌ ನಿರ್ಮಾಣಕ್ಕೆ ಕೈ ಹಾಕಿದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ

- Advertisement -

Bengaluru News: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಉಪನಗರ ಯೋಜನೆಯ ಜಾರಿಗಾಗಿ ಇದೀಗ ರಾಜ್ಯ ಸರ್ಕಾರ ಮುಂದಾಗಿದ್ದು, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮೂಲಕ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಇನ್ನೂ ಈ ಸಂಬಂಧ ಕಳೆದ ಮಾರ್ಚ್‌ 13ರಂದು ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಈ ಯೋಜನೆಗೆ ಬೇಕಾಗುವ ಒಟ್ಟು 8,940 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ತಿಳಿಸಿದೆ. ಅಲ್ಲದೆ ನಿಗದಿ ಪಡಿಸಿದ ಜಮೀನಿನ ಮೇಲೆ ಹಕ್ಕು ಹೊಂದಿರುವವರಲ್ಲಿ ಈ ಬಗ್ಗೆ ಯಾರಿಗಾದರೂ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಆಯುಕ್ತರಿಗೆ ಮನವಿ ಸಲ್ಲಿಸಬಹುದಾಗಿದೆ. ಅಂದಹಾಗೆ ಅಧಿಸೂಚನೆ ಹೊರಡಿಸಿದ 30 ದಿನಗಳ ಒಳಗಾಗಿ ಖುದ್ದಾಗಿ ಅಥವಾ ಪ್ರತಿನಿಧಿಗಳ ಮೂಲಕವೂ ತಮ್ಮ ದೂರುಗಳನ್ನು ದಾಖಲು ಮಾಡಲು ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಪ್ರಮುಖವಾಗಿ ಈ ಅಧಿಸೂಚನೆಯ ಬಳಿಕ ಈ ಯೋಜನಾ ವ್ಯಾಪ್ತಿ ಪ್ರದೇಶಕ್ಕೆ ಒಳಪಡುವ ಎಲ್ಲ ಜಮೀನುಗಳನ್ನು ಮಾರಾಟ ಮಾಡುವುದು, ಕ್ರಯ ಪತ್ರ, ಲೀಸ್‌ ನೀಡುವುದು ಸೇರಿದಂತೆ ಖಾತಾ ಬದಲಾವಣೆ ಮಾಡುವಂತಿಲ್ಲ. ಅಲ್ಲದೆ ಈ ಭೂ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡುವಂತಿಲ್ಲ. ಹಾಗೆಯೇ ಯಾವುದೇ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಪ್ರಾಧಿಕಾರದ ಸೂಚನೆಯನ್ನು ಮೀರಿ ಯಾರಾದರೂ ಈ ರೀತಿಯಾಗಿ ನಿಯಮ ಉಲ್ಲಂಘಿಸಿದರೆ ಭೂ ಪರಿಹಾರದ ಹಣ ನಿಗದಿ ಪಡಿಸುವಾಗ ಈ ಚಟುವಟಿಕೆ ಹಾಗೂ ವ್ಯವಹಾರಗಳ ಲೆಕ್ಕವನ್ನು ಗಣನೆಗೆ ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಈ ಇಡೀ ಯೋಜನೆಗೆ ಸಂಬಂಧಿಸಿರುವ ಸಂಪೂರ್ಣ ನೀಲ ನಕ್ಷೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ರಾಮನಗರ ಕಚೇರಿಯಲ್ಲಿ ಇರಿಸಲಾಗಿದೆ. ಇನ್ನೂ ಈಗಾಗಲೇ ಹೊರಡಿಸಿರುವ ಅಧಿಸೂಚನೆಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿನ ಜನವಸತಿ, ಅಭಿವೃದ್ದಿ ಹೊಂದಿದ ಪ್ರದೇಶಗಳು ಹಾಗೂ ಸಾರ್ವಜನಿಕರು ಉಪಯೋಗಿಸುತ್ತಿದ್ದ ಸೌಲಭ್ಯಗಳನ್ನು ಮುಂದುವರೆಸುವ ಬಗ್ಗೆ ಸ್ಥಳೀಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನೇಮಿಸಲಾಗಿರುವ ಸಮಿತಿಯು ಮಾಡುವ ಶಿಫಾರಸ್ಸಿನ ಮೇಲೆ ಪರಿಶೀಲನೆ ಮಾಡಿ ನಿರ್ಧಾರ ಪಡೆಯಲಾಗುತ್ತದೆ. ಇನ್ನೂ ಜಮೀನಿನ ವಿಚಾರದಲ್ಲಿ ಆಕಾರ ಬಂದ್‌ ಹಾಗೂ ಆರ್‌ಟಿಸಿ ವಿಸ್ತ್ರೀರ್ಣಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಆಕಾರ್‌ ಬಂದ್‌ ದಾಖಲೆಯೇ ಅಂತಿಮವಾಗಿ ಪರಿಗಣಿಸಲಾಗುವುದೆಂದು ಪ್ರಾಧಿಕಾರವು ಹೇಳಿದೆ.

ಭೂ ಸ್ವಾಧೀನಕ್ಕೆ ಗ್ರೇಟರ್‌ ಸಿಬ್ಬಂದಿ ಬಳಕೆ..

ಇನ್ನೂ ನಿರೀಕ್ಷಿತ ಟೌನ್‌ಶಿಪ್‌ ನಿರ್ಮಾಣ ಕಾರ್ಯದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಸಿಬ್ಬಂದಿಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ನ್ಯಾಯಯೋಚಿತ ಪರಿಹಾರ, ಪಾರದರ್ಶಕತೆ, ಪುನರ್‌ ವ್ಯವಸ್ಥೆ ಹಕ್ಕಿನ ಅಧಿನಿಯಮದ ಅಡಿಯಲ್ಲಿ ಕರ್ತವ್ಯ ನಿರ್ವಹಿಸಲು ಅವರಿಗೆ ಅಧಿಕಾರ ವಹಿಸಲಾಗಿದೆ. ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರದ ಕಾಯ್ದೆಯ ಅನ್ವಯ ಪ್ರಾಧಿಕಾರದಿಂದ ಬಿಡದಿ ವ್ಯಾಪ್ತಿಯಲ್ಲಿ ಗೊತ್ತುಪಡಿಸಿದ ಜಮೀನುಗಳಿಗೆ ಸಂಬಂಧಿಸಿದವರು ಯಾರೇ ಆಗಲಿ ಸಿಬ್ಬಂದಿಗಳಿಗೆ ತೊಂದರೆ ನೀಡುವುದು,ಅನಾನುಕೂಲ ಮಾಡುವುದು ಸೇರಿದಂತೆ ಅಡ್ಡಿಪಡಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಎಲ್ಲ ಜಮೀನುದಾರರಿಗೆ ಸೂಚಿಸಲಾಗಿದೆ.

ಪ್ರಮುಖವಾಗಿ ರಾಮನಗರ ತಾಲೂಕಿನ ಬಿಡದಿ-2 ಹೋಬಳಿ, ಮಂಡಲ ಹಳ್ಳಿಯ 52 ಮಾಲೀಕರ 71 ಎಕರೆ, ಹೊಸೂರು ಗ್ರಾಮದ 2990 ಮಂದಿಯ 2452 ಎಕರೆ, ಭೈರಮಂಗಲ ಗ್ರಾಮದ 1847 ಜನರ 1131 ಎಕರೆ, ಬನ್ನಿಗಿರಿ ಗ್ರಾಮದ 1177 ಮಂದಿಯ 714 ಎಕರೆ ಜಮೀನಿನ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಅಲ್ಲದೆ ಕೆಂಪಯ್ಯನ ಪಾಳ್ಯ ಗ್ರಾಮದ 586 ಮಂದಿಯ 330 ಎಕರೆ, ಕೆ.ಜಿ. ಗೊಲ್ಲರಹಳ್ಳಿ ಗ್ರಾಮದ 221 ಮಂದಿಯ314 ಎಕರೆ, ಕಂಚುಗಾರನಹಳ್ಳಿ ಗ್ರಾಮದ 1410 ಜನರ 755 ಎಕರೆ, ಅರಳಾಳು ಸಂದ್ರ ಗ್ರಾಮದ 2064 ಮಂದಿಯ 1461 ಎಕರೆ ಹಾಗೂ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮದ 103 ಮಂದಿಯ 63 ಎಕರೆ ಭೂ ಸ್ವಾಧೀನಕ್ಕೆ ಪ್ರತ್ಯೇಕವಾಗಿ 9 ಅಧಿಸೂಚನೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವತಿಯಿಂದ ಹೊರಡಿಸಲಾಗಿದೆ.

2024ರಲ್ಲಿ ಮೇಲ್ದರ್ಜೆಗೆ ಏರಿದ್ದ ಬೆಂಗಳೂರು-ಬಿಡದಿ ಉಪನಗರ ಯೋಜನಾ ಪ್ರಾಧಿಕಾರ..

ಅಂದಹಾಗೆ ಬಿಡದಿ ಬಳಿ ಉಪನಗರ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳೆದ 2024ರ ನವೆಂಬರ್‌ 18ರಂದು ಗ್ರೇಟರ್‌ ಬೆಂಗಳೂರು-ಬಿಡದಿ ಉಪನಗರ ಯೋಜನಾ ಪ್ರಾಧಿಕಾರವನ್ನು ಗ್ರೇಟರ್‌ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಅಲ್ಲದೆ ಬೆಂಗಳೂರು ಅಸ್ಕರ್‌ ಅಲಿ ರಸ್ತೆಯಲ್ಲಿದ್ದ ಬಿಎಂಆರ್‌ಡಿಎ ಕಚೇರಿಯಲಿದ್ದ ಪ್ರಾಧಿಕಾರದ ಕಚೇರಿಯನ್ನು ರಾಮನಗರ ಕಂದಾಯ ಭವನದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಇನ್ನೂ ಬಿಡದಿ ಬಳಿಯ ಉಪನಗರ ನಿರ್ಮಾಣ ಮಾಡಲು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಇನ್ನೂ ಗ್ರೇಟರ್‌ ಬೆಂಗಳೂರು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬಿಡದಿ ಹೋಬಳಿಯ 26 ಗ್ರಾಮಗಳು, ರಾಮನಗರ ತಾಲೂಕಿನ ಕಸಬಾ ಹೋಬಳಿಯ 14 ಗ್ರಾಮಗಳು, ಕೈಲಾಂಚ ಹೋಬಳಿಯ 3 ಗ್ರಾಮಗಳು, ಹಾರೋಹಳ್ಳಿ ಹೋಬಳಿಯ 6 ಗ್ರಾಮಗಳು ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ 8 ಗ್ರಾಮಗಳನ್ನು ಒಟ್ಟಾಗಿ ಸೇರಿಸಿ 59 ಗ್ರಾಮಗಳನ್ನು ಒಳಗೊಂಡಂತೆ 23, 361 ಹೆಕ್ಟೇರ್‌ ವಿಸ್ತೀರ್ಣದಲ್ಲಿ 92, 822 ಜನಸಂಖ್ಯೆಯನ್ನು ಒಳಗೊಂಡಿರುವ ಪ್ರದೇಶವನ್ನು ಗ್ರೇಟರ್‌ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ.

ರೈತರಿಂದ ಭೂ ಸ್ವಾಧೀನಕ್ಕೆ ವಿರೋಧ..

ಅಲ್ಲದೆ ಈ ಉಪನಗರ ನಿರ್ಮಾಣಕ್ಕೆ ಮುಂದಾಗಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ನಿರ್ಧಾರಕ್ಕೆ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಸುತ್ತ ಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರೈತರು ಹೋರಾಟ ಸಮಿತಿಯನ್ನು ರಚಿಸಿ ಬಿಡದಿಯಿಂದ ರಾಮನಗರದವರೆಗೆ ಬೃಹತ್‌ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಿದ್ದಾರೆ.

- Advertisement -

Latest Posts

Don't Miss