International Political News: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತೀಚಿಗೆ ಅಮೆರಿಕದ ಪಾಡ್‌ಕಾಸ್ಟರ್ ಲೆಕ್ ಫ್ರಿಡ್ಮನ್ ಅವರೊಂದಿಗೆ ನಡೆಸಿದ್ದ ಪಾಡ್‌ಕಾಸ್ಟ್‌ನಲ್ಲಿ ಚೀನಾ ಹಾಗೂ ಭಾರತದ ನಡುವಿನ ಸಂಬಂಧದ ಕುರಿತು ಮಾತನಾಡಿದ್ದರು. ಅಲ್ಲದೆ ಈ ವೇಳೆ ಅವರು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಭಾರತ ಹಾಗೂ ಚೀನಾ ದೇಶಗಳ ನಡುವಿನ ಸಂಬಂಧವು ಯಥಾಸ್ಥಿತಿಗೆ ಮರಳಿದೆ ಎಂದು ಹೇಳಿದ್ದರು. ಇದೀಗ ಖುಷ್ ಆಗಿರುವ ಚೀನಾ ಭಾರತದ ಪ್ರಧಾನಿಗಳ ಮಾತುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ ಈ ವಿಚಾರವಾಗಿ ಮಾತನಾಡಿರುವ ಚೀನಾ, ನರೇಂದ್ರ ಮೋದಿ ಧನಾತ್ಮಕವಾಗಿ ಅಭಿಪ್ರಾಯ ಹಂಚಿಕೊಂಡಿರುವುದನ್ನು ನೋಡಿದಾಗ ಎರಡೂ ದೇಶಗಳು ಪರಸ್ಪರ ಲಾಭವಾಗುವಂತಹ ಸಹಕಾರ ಮನೋಭಾವವನ್ನು ಹೊಂದುವುದು ಉತ್ತಮವಾಗಿದೆ. ಅದನ್ನು ಬಿಟ್ಟು ನಮ್ಮ ಎದುರಿಗೆ ಬೇರೆ ಅವಕಾಶಗಳಿಲ್ಲ ಎಂದು ಬೀಜಿಂಗ್‌ನಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ತಿಳಿಸಿದ್ದಾರೆ.
ಅಲ್ಲದೆ 2000 ವರ್ಷಗಳಿಗೂ ಹೆಚ್ಚಿನ ಕಾಲದ ಇತಿಹಾಸದಲ್ಲಿ, ಎರಡೂ ದೇಶಗಳು ಅಂದರೆ ಭಾರತ ಮತ್ತು ಚೀನಾ ಸ್ನೇಹಪರ ವಿನಿಮಯವನ್ನು ಉಳಿಸಿಕೊಂಡಿವೆ ಎಂದು ನಾನು ಒತ್ತಿ ಹೇಳುತ್ತೇನೆ. ಎರಡೂ ದೇಶಗಳು ಪರಸ್ಪರ ಕಲಿತು ನಾಗರಿಕತೆಯ ಸಾಧನೆಗಳು ಮತ್ತು ಮಾನವ ಪ್ರಗತಿಗೆ ಕೊಡುಗೆ ನೀಡಿವೆ. ಈ ಹೇಳಿಕೆಯು ಪ್ರಧಾನಿ ಮೋದಿಯವರ ಭಾವನೆಗಳನ್ನು ಪ್ರತಿಧ್ವನಿಸುವಂತಿದೆ. ಭಾರತ ಮತ್ತು ಚೀನಾ ನಡುವೆ ನಿಜವಾದ ಸಂಘರ್ಷದ ಇತಿಹಾಸವಿಲ್ಲ. ಅವರ ಸಂಬಂಧ ಹೊಸದಲ್ಲ ಎಂದು ಮಾವೋನಿಂಗ್ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಚೀನಾ ಕುರಿತು ಮೋದಿ ಹೇಳಿದ್ದೇನು..?
ಇನ್ನೂ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಮೋದಿ ಸುದೀರ್ಘ ಕಾಲ ಪಾಡ್‌ಕಾಸ್ಟ್ ನಡೆಸಿ ಚೀನಾ ಹಾಗೂ ಭಾರತದ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಅದರಲ್ಲಿ ಚೀನಾ ಕುರಿತ ಪ್ರಶ್ನೆಗಳಿಗೆ ಉತ್ತರಿಸಿರುವ ಮೋದಿ, ನೋಡಿ ಭಾರತ ಮತ್ತು ಚೀನಾ ನಡುವಿನ ಸಂಬಂಧವು ಹೊಸದೇನಲ್ಲ. ಎರಡೂ ರಾಷ್ಟ್ರಗಳು ಪ್ರಾಚೀನ ಸಂಸ್ಕೃತಿಗಳು ಮತ್ತು ನಾಗರಿಕತೆಗಳನ್ನು ಹೊಂದಿವೆ. ಆಧುನಿಕ ಜಗತ್ತಿನಲ್ಲಿಯೂ ಸಹ, ಅವು ಮಹತ್ವದ ಪಾತ್ರವನ್ನು ವಹಿಸುತ್ತವೆ. ನೀವು ಐತಿಹಾಸಿಕ ದಾಖಲೆಗಳನ್ನು ನೋಡಿದರೆ, ಶತಮಾನಗಳಿಂದ, ಭಾರತ ಮತ್ತು ಚೀನಾ ಪರಸ್ಪರ ಕಲಿತಿವೆ. ಒಟ್ಟಾಗಿ, ಅವರು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಜಾಗತಿಕ ಒಳಿತಿಗೆ ಕೊಡುಗೆ ನೀಡಿದ್ದಾರೆ. ಇತಿಹಾಸದ ಒಂದು ಹಂತದಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ವಿಶ್ವದ ಜಿಡಿಪಿಯ ಅರ್ಧಕ್ಕಿಂತ ಹೆಚ್ಚಿನ ಕೊಡುಗೆ ನೀಡಿವೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇನ್ನೂ ಚೀನಾದ ಮೇಲೆ ಬೌದ್ಧಧರ್ಮದ ಆಳವಾದ ಪ್ರಭಾವದ ಬಗ್ಗೆ ಮಾತನಾಡಿದ್ದ ಮೋದಿ, ಭಾರತದಲ್ಲಿ ಬೌದ್ಧಧರ್ಮದ ಮೂಲವು ಎರಡು ಪ್ರಾಚೀನ ನಾಗರಿಕತೆಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ನಾವು ಶತಮಾನಗಳನ್ನು ಹಿಂತಿರುಗಿ ನೋಡಿದರೆ, ನಮ್ಮ ನಡುವೆ ಸಂಘರ್ಷದ ನಿಜವಾದ ಇತಿಹಾಸವಿಲ್ಲ. ಅದು ಯಾವಾಗಲೂ ಪರಸ್ಪರ ಕಲಿಯುವುದು ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವುದರ ಕುರಿತಷ್ಟೇ ಸಂಘರ್ಷವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಅಲ್ಲದೆ ದೀರ್ಘಕಾಲದ ಗಡಿ ವಿವಾದಗಳ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, 2020 ರಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ನಡೆದಿದ್ದ ಘರ್ಷಣೆಗಳ ನಂತರ ಉದ್ಭವಿಸಿದ ಘಟನೆಗಳನ್ನು ಮೆಲುಕು ಹಾಕಿದ್ದರು.
ಕಳೆದ ವರ್ಷ ನವೆಂಬರ್‌ನಲ್ಲಿ, ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದ ನಂತರ ಭಾರತ ಮತ್ತು ಚೀನಾದ ಪಡೆಗಳು ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ ಎಲ್‌ಎಸಿ ಉದ್ದಕ್ಕೂ ಗಸ್ತು ತಿರುಗಲು ಪುನರಾರಂಭಿಸಿದ್ದವು. ಇನ್ನೂ 2020 ರ ಮೇ-ಜೂನ್‌ನಲ್ಲಿ ಪ್ಯಾಂಗೊಂಗ್ ಸರೋವರ ಮತ್ತು ಗಾಲ್ವಾನ್‌ನಲ್ಲಿ ಎರಡೂ ಕಡೆಯ ನಡುವಿನ ಘರ್ಷಣೆಯ ನಂತರ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಈ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆಯನ್ನು ನಿಲ್ಲಿಸಲಾಗಿತ್ತು ಎಂದು ಹೇಳಿದ್ದರು.
ಅಂದಹಾಗೆ ನಮ್ಮ ನಡುವೆ ಗಡಿ ವಿವಾದಗಳು ಇರುವುದು ನಿಜ. 2020 ರಲ್ಲಿ, ಗಡಿಯಲ್ಲಿನ ಘಟನೆಗಳು ನಮ್ಮ ದೇಶಗಳ ನಡುವೆ ಗಮನಾರ್ಹ ಉದ್ವಿಗ್ನತೆಯನ್ನು ಸೃಷ್ಟಿಸಿದ್ದವು. ಆದಾಗ್ಯೂ, ಅಧ್ಯಕ್ಷ ಕ್ಸಿ ಅವರೊಂದಿಗಿನ ನನ್ನ ಇತ್ತೀಚಿನ ಸಭೆಯ ನಂತರ, ಗಡಿಯಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವುದನ್ನು ನಾವು ನೋಡಿದ್ದೇವೆ ಎಂದು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದರು.