ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿವಿಧ ಇಲಾಖೆಯ ಹುದ್ದೆಗಳ ನೇಮಕಾತಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ.2021 -22 ನೇ ಸಾಲಿನಲ್ಲಿ ಕೊರೋನಾ ಕಾರಣದಿಂದ ಆರ್ಥಿಕ ಮಿತವ್ಯಯ ಸಾಧಿಸಲು ನಿರ್ಬಂಧ ವಿಧಿಸಲಾಗಿತ್ತು.
ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಉಳಿದಿದ್ದು, ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ವೃಂದ ನೇಮಕಾತಿ, ಬ್ಯಾಕ್ಲಾಗ್ ಹುದ್ದೆಗಳು, ಹೊಸ ಹುದ್ದೆಗಳ ಸೃಜನೆ, ನೇರ ನೇಮಕಾತಿ ಮಾಡಿಕೊಳ್ಳಲು ತಡೆ ತೆರವುಗೊಳಿಸಿ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ನೇರ ನೇಮಕಾತಿ ಅಡಿ ಹುದ್ದೆಗಳ ಭರ್ತಿ ಮಾಡಿಕೊಳ್ಳುವ ಹುದ್ದೆಗಳಿಗೆ ಆಯವ್ಯಯದಲ್ಲಿ ಸೂಕ್ತ ಅನುದಾನ ಕಲ್ಪಿಸಿಕೊಡುವ ಸಲುವಾಗಿ ನೇಮಕಾತಿ ಆದೇಶಕ್ಕೆ ಮೊದಲು ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ.
ವಾಹನ ಚಾಲಕರು, ಗ್ರೂಪ್ ಡಿ ವೃಂದದ ಹುದ್ದೆಗಳು, ಬೆರಳಚ್ಚುಗಾರ, ಶಿಘ್ರಲಿಪಿಗಾರ ಹುದ್ದೆಗಳನ್ನು ಅನುದಾನದ ಲಭ್ಯತೆಯ ಒಳಪಟ್ಟು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ವೃಂದ ಬಲ ಶೇಕಡ 80 ಕ್ಕಿಂತ ಕಡಿಮೆ ಇರುವ ಸಂದರ್ಭದಲ್ಲಿ ಆಡಳಿತ ಇಲಾಖೆಗಳು ತಮ್ಮ ಹಂತದಲ್ಲಿಯೇ ನಿಯಮಾನುಸಾರ ನೇರ ನೇಮಕಾತಿ ಮಾಡಿಕೊಳ್ಳಲು ತಿಳಿಸಲಾಗಿದೆ.