Crime Story:
ಸಿನಿಮೀಯ ಶೈಲಿಯಲ್ಲಿ ದಕ್ಷಿಣ ದೆಹಲಿಯ ಸಫ್ದರ್‌ಜಂಗ್ ಪ್ರದೇಶದಲ್ಲಿ ವಿಕಲಚೇತನ ಯುವಕನನ್ನು ಕೊಂದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆ ಬಾಲಕ ಮನೆಗೆಲಸದ ಸಹಾಯಕನಾಗಿ ಯುವಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆ ವಿಕಲಚೇತನ ಯುವಕನ ಪೋಷಕರು ದೇವಸ್ಥಾನಕ್ಕೆ ಹೋಗಿದ್ದರು. ಆಗ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಬಾಲಕ ಆ ಯುವಕನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಾಪರಾಧಿಯು ಬಾಲಿವುಡ್ನ ತೋ ಚೋರ್ ಮೇ ಸಿಪಾಹಿ ಸಿನಿಮಾದಿಂದ ಸ್ಫೂರ್ತಿ ಪಡೆದಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆತ ಆ ಸಿನಿಮಾದಲ್ಲಿ ತೋರಿಸಿರುವಂತೆ ಕಪ್ಪು ಬಣ್ಣದ ಗ್ಲೌಸ್ ಹಾಕಿಕೊಂಡು, ಅದನ್ನು ಆ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮೃತನ ಪೋಷಕರು ಮತ್ತು ಅಜ್ಜಿ ದೇವಸ್ಥಾನಕ್ಕೆ ಹೋಗಿದ್ದರು. ಅದಾದ 1 ಗಂಟೆಯ ನಂತರ ಆ ಮೃತ ವ್ಯಕ್ತಿಯ ಸಹೋದರಿ ತನ್ನ ವಿಕಲಚೇತನನಾದ ತಮ್ಮನನ್ನು 3 ತಿಂಗಳ ಹಿಂದೆ ತಮ್ಮ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ಸೇವಕನ ಜೊತೆಗೆ ಕಳುಹಿಸಿದ್ದಳು. ಆದರೆ, ಅವಳು ಮನೆಗೆ ಹಿಂತಿರುಗಿ ಬಂದಾಗ ತನ್ನ ಸಹೋದರ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದ. ಆಗ ತನ್ನ ಮನೆಯ ಸಹಾಯಕ ಕಾಣೆಯಾಗಿರುವುದನ್ನು ನೋಡಿ ಅವಳಿಗೆ ಗಾಬರಿಯಾಗಿದೆ. ಗಾಬರಿಯಿಂದ ಆ ಮನೆಯನ್ನು ಪರಿಶೀಲಿಸಿದಾಗ ಕೆಲವು ಆಭರಣಗಳು, ಮೊಬೈಲ್ ಫೋನ್ ಮತ್ತು ಸುಮಾರು 40 ಸಾವಿರ ರೂ. ನಗದು ನಾಪತ್ತೆಯಾಗಿರುವುದು ದೃಢಪಟ್ಟಿದೆ. ಕೊಲೆ ಮಾಡಿರುವ ಅಪರಾಧಿ ಬಿಹಾರದ ಸೀತಾಮರ್ಹಿಯಲ್ಲಿರುವ ತನ್ನ ಹುಟ್ಟೂರಿಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ನವದೆಹಲಿ ರೈಲು ನಿಲ್ದಾಣದಿಂದ ಬಂಧಿಸಲಾಯಿತು. ಆತನ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ವಿಚಾರಣೆಯ ಸಮಯದಲ್ಲಿ ತಾನೇ ಕೊಲೆ ಮಾಡಿದ್ದಾಗಿ 17 ವರ್ಷದ ಬಾಲಕ ಒಪ್ಪಿಕೊಂಡಿದ್ದು, ನಾನು ಮನೆಯನ್ನು ಕ್ಲೀನ್ ಮಾಡುತ್ತಿದ್ದಾಗ ನನಗೆ ಸಾಕಷ್ಟು ಅವಮಾನ ಮಾಡುತ್ತಿದ್ದರು. ನಾನು ಆ ಮನೆಯನ್ನು ಬಿಟ್ಟು ಹೊರಡುವ ಮೊದಲು ಹಣ ಸಂಪಾದಿಸಬೇಕೆಂದು ಆ ಮನೆಯನ್ನು ದರೋಡೆ ಮಾಡಲು ಯೋಚಿಸಿದ್ದೆ. ಆದರೆ ವಿಕಲಚೇತನ ಯುವಕ ನಾನು ದರೋಡೆ ಮಾಡುವುದನ್ನು ನೋಡಿದ್ದರಿಂದ ಭಯದಿಂದ ಆತನನ್ನು ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ ಆರೋಪಿ.