ಹರಿಪ್ರಸಾದ್ ‘ಗಾಂಧಿ-ಗೋಡ್ಸೆ-ಗೋವು’ ಎಂದು ಶಾಂತಿ ಕದಡುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ: ಜೋಶಿ ಆಕ್ರೋಶ

Political News: ಬಿ.ಕೆ.ಹರಿಪ್ರಸಾದ್ ಅವರು ನೀಡಿದ ಗಾಂಧಿ ಮತ್ತು ಗೋಡ್ಸೆ ಹೇಳಿಕೆ, ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ಕೆಪಿಸಿಸಿ ಅಧ್ಯಕ್ಷ‌ ಬಿಕೆ ಹರಿಪ್ರಸಾದ್ ಕಾಂಗ್ರೆಸ್ ಹೈಕಮಾಂಡ್ ಓಲೈಸಲು ಹಾಗೂ ಹತಾಶೆಯಿಂದ ‘ಗಾಂಧಿ-ಗೋಡ್ಸೆ-ಗೋವು’ ಎಂದು ಸಮಾಜದಲ್ಲಿ ಶಾಂತಿ ಕದಡುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಇದು ಅತ್ಯಂತ ಕೀಳು ಮಟ್ಟದ ರಾಜಕೀಯ ಮತ್ತು ಸಂಸ್ಕೃತಿಹೀನತೆಯ ಪ್ರತೀಕ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದಲೂ ಜನ ಕಲ್ಯಾಣವನ್ನು ಮರೆತು, ಕೇವಲ ತುಷ್ಠಿಕರಣ ಹಾಗೂ ಓಲೈಕೆ ರಾಜಕಾರಣ ಮತ್ತು ಸಮಾಜವನ್ನು ಒಡೆಯುವ ಕೆಲಸಕ್ಕಷ್ಟೇ ಆದ್ಯತೆ ನೀಡುತ್ತಾ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ಕಿಡಿಕಾರಿದ್ದಾರೆ.

ದೇಶದ ಪ್ರಧಾನಮಂತ್ರಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೋಟ್ಯಂತರ ಜನರ ಮತಗಳ ಮೂಲಕ ಆಯ್ಕೆಯಾದವರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಿಗೆ ಈ ರೀತಿಯ ಕೀಳು ಹೋಲಿಕೆ ಮಾಡುವುದು ಆ ಹುದ್ದೆಗಳ ಘನತೆಗೆ ಹಾಗೂ ಭಾರತದ ಮತದಾರರಿಗೆ ಮಾಡುವ ಅಪಮಾನ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಅಹಿಂಸೆಯ ಮಾರ್ಗವನ್ನು ಬಾಯಿಮಾತಿನಲ್ಲಿ ಹೇಳುವವರು, ವಾಸ್ತವದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಕಲಿ ಗಾಂಧಿಗಳ ಜೊತೆಗೂಡಿ ಯತ್ನಿಸುತ್ತಿದ್ದಾರೆ. ಇದು ರಾಜಕೀಯ ದ್ವೇಷದ ಪರಮಾವಧಿ. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದು, ಸಿಖ್ ಹತ್ಯಾಕಾಂಡವನ್ನು ಸೇರಿದಂತೆ ಹಲವು ಕಹಿ ಘಟನೆಗಳನ್ನು ಹಾಗೂ ತಮ್ಮ ವೈಫಲ್ಯಗಳನ್ನು ಮರೆತ ಕಾಂಗ್ರೆಸ್ ನಾಯಕರು ಸದಾ ಇಂತಹ ಪ್ರಚೋದನಾತ್ಮಕ ಮತ್ತು ವಿಭಜಕ ಹೇಳಿಕೆಗಳ ಮೊರೆ ಹೋಗುತ್ತಿದ್ದಾರೆ.

ನೈತಿಕತೆ ಮತ್ತು ಗೌರವದ ಪಾಠ ಮಾಡುವ ಮೊದಲು, ಸಾಂವಿಧಾನಿಕ ಹುದ್ದೆಗಳ ಘನತೆಯನ್ನು ಗೌರವಿಸಲು ಕಲಿಯಿರಿ. ಸಮಾಜದ ಶಾಂತಿ ಮತ್ತು ಸೌಹಾರ್ದತೆಯನ್ನು ಬಲಿಗೊಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಹರಿಪ್ರಸಾದ್, ಅಧಿಕಾರದ ಮದದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಖಂಡಿತವಾಗಿಯೂ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

About The Author