ಹರಿಯಾಣ ವಿಧಾನಸಭಾ ಚುನಾವಣೆಗೆ ಇವತ್ತಿಗೆ ಸರಿಯಾಗಿ ಒಂದು ತಿಂಗಳು ಬಾಕಿ ಇದೆ. ಹರಿಯಾಣದ 90 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಬಿಜೆಪಿ 67 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದ್ರೆ, ಇದ್ರಲ್ಲಿ ಹಾಲಿ 9 ಶಾಸಕರಿಗೆ ಟಿಕೆಟ್ ನೀಡಿಲ್ಲ. ಇದ್ರ ಬೆನ್ನಲ್ಲೇ ಅಸಮಾಧಾನ ಸ್ಫೋಟಕಗೊಂಡಿದ್ದ, ಕಮಲ ಪಾಳೆಯದಲ್ಲಿ ರಾಜೀನಾಮೆಯ ಪರ್ವ ಶುರುವಾಗಿದೆ.
ರಾನಿಯಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಸಚಿವ ರಂಜಿತ್ ಸಿಂಗ್ ಚೌಟಾಲ ಅವರಿಗೆ ಈ ಟಿಕೆಟ್ ನೀಡಿಲ್ಲ. ಹೀಗಾಗಿ, ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿರೋ ಚೌಟಾಲ, ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 2009 ಹಾಗೂ 2014ರ ವಿಧಾನಸಭಾ ಚುನಾವಣೆಯಲ್ಲಿ ರಾನಿಯಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚೌಟಾಲ ಸೋಲುಕಂಡಿದ್ದರು. ಬಳಿಕ 2019 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚೌಟಾಲ ಅವರು, 19431 ಮತಗಳ ಅಂತರದಿಂದ ಗೆಲುವು ಸಾಧಿಸಿ, ಕೃಷಿ ಸಚಿವರು ಕೂಡ ಆಗಿದ್ರು. ಆದ್ರೀಗ, ಬಿಜೆಪಿ ಹೈಕಮಾಂಡ್ ಚೌಟಾಲ ಕೊಕ್ ಕೊಟ್ಟಿದ್ದು, ಶಿಶ್ಪಾಲ್ ಕಂಬೋಜ್ ಅವರಿಗೆ ಟಿಕೆಟ್ ಕೊಟ್ಟಿದೆ. ಹೀಗಾಗಿ, ಬೇಸರಗೊಂಡಿರೋ ಚೌಟಾಲ, ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಅಸಮಾಧಾನಗೊಂಡಿರುವ ರಣಜಿತ್ ಸಿಂಗ್ ಚೌತಾಲಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ನಾನು ರಾನಿಯಾ ಅಸೆಂಬ್ಲಿಯಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಟಿಯಾ ಶಾಸಕ ಸ್ಥಾನಕ್ಕೆ ಲಕ್ಷ್ಮಣ್ ನಾಪಾ ರಾಜೀನಾಮೆ!
ಚೌಟಾಲ ಅವರು ಮಾತ್ರವಲ್ಲ, ರಾಟಿಯಾ ಶಾಸಕ ಸ್ಥಾನಕ್ಕೆ ಲಕ್ಷ್ಮಣ್ ನಾಪಾ ಕೂಡ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಮೋಹನ್ ಲಾಲ್ ಬಡೋಲಿ ಅವರಿಗೆ ಪತ್ರ ಬರೆದಿರುವ ನಾಪಾ, ತಾನು ಪಕ್ಷವನ್ನು ತ್ಯಜಿಸುವುದಾಗಿ ಮತ್ತು ಅದರ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ರಾಟಿಯಾದಿಂದ ಬಿಜೆಪಿ ಸಿರ್ಸಾದ ಮಾಜಿ ಸಂಸದೆ ಸುನೀತಾ ದುಗ್ಗಲ್ ಅವರನ್ನು ಕಣಕ್ಕಿಳಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ತನ್ವಾರ್ ಅವರಿಗೆ ಸಿರ್ಸಾ ಲೋಕಸಭಾ ಕ್ಷೇತ್ರ ಟಿಕೆಟ್ ನೀಡಲಾಗಿತ್ತು. ಹೀಗಾಗಿ, ಸುನೀತಾ ದುಗ್ಗಲ್ ಅವರಿಗೆ ಟಿಕೆಟ್ ಕೈತಪ್ಪಿತ್ತು. ಹೀಗಾಗಿ, ವಿಧಾನಸಭಾ ಚುನಾವಣೆಯಲ್ಲಿ ರಾಟಿಯಾ ಕ್ಷೇತ್ರದಿಂದ ಸುನೀತಾ ಅವರಿಗೆ ಟಿಕೆಟ್ ನೀಡಲಾಗಿದ್ದು, ಲಕ್ಷ್ಮ್ ನಾಪಾ ಅವರಿಗೆ ಶಾಕ್ ಕೊಟ್ಟಿದೆ.
ಒಟ್ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ಕೊಟ್ಟು ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ, ಇದೀಗ ಹರಿಯಾಣದಲ್ಲೂ ಹೊಸಮುಖಗಳಿಗೆ ಮಣೆಹಾಕಲು ಮುಂದಾಗಿದೆ. ಇದು ಬಿಜೆಪಿ ಪಾಲಿಗೆ ಲಾಭ ಆಗುತ್ತೆ? ಮತ್ತಷ್ಟು ಶಾಸಕರು ಬಂಡಾಯ ಬಾವುಟ ಹಾರಿಸ್ತಾರಾ ಅನ್ನೋದನ್ನ ಕಾದುನೋಡ್ಬೇಕಿದೆ.