2023 ಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ (BJP) ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ, ಅವರ ಸೀಟುಗಳು 40ಕ್ಕೆ ಇಳಿಯುತ್ತವೆ ಎಂದು ಹಾಸನದಲ್ಲಿ ಎಚ್ ಡಿ ರೇವಣ್ಣ (H D Revanna) ಹೇಳಿದ್ದಾರೆ. ಈ ರೀತಿಯ ಕೆಟ್ಟ ಆಡಳಿತವನ್ನು ನೀಡುತ್ತಿರುವ ಸರ್ಕಾರವನ್ನು ನನ್ನ ಜೀವನದಲ್ಲಿ ನಾನು ನೋಡಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿ ಎಂದರೆ ಇವರು ಕೇಸರಿ ಶಾಲನ್ನು ನೀಡುತ್ತಿದ್ದಾರೆ, ಅವರ ಧರ್ಮವನ್ನು ಅವರು ಆಚರಣೆ ಮಾಡಿದರೆ ಇವರಿಗೆ ಏನು ತೊಂದರೆ ಎಂದು ಹಿಜಾಬ್ (Hijab) ಪರ ಮಾತನಾಡಿದ್ದು, ಕೋರ್ಟ್ (court) ನಲ್ಲಿ ವಿವಾದ ಇದೆ, ಅಂತಿಮ ತೀರ್ಪು ಬರುವವರೆಗೂ ಕಾಯಬೇಕು, ಹಿಜಾಬ್ ಎಂಬುದು ನಿನ್ನೆ ಮೊನ್ನೆ ಶುರುವಾದಂತಹ ಪದ್ಧತಿಯಲ್ಲ, ಹಿಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಒಂದು ಪಕ್ಷ ಅಲ್ಪಸಂಖ್ಯಾತರನ್ನು (Minorities) ಓಲೈಕೆ ಮಾಡುತ್ತಿದೆ, ಇನ್ನೊಂದು ಪಕ್ಷ ಹಿಂದುಗಳ ಪರ ಇದೆ, ಎರಡು ಪಕ್ಷಗಳು ಸೇರಿಕೊಂಡು ಸಮಾಜವನ್ನು ಒಡೆಯಲು ಹೋಗಬಾರದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಇದು ಪಾಪರ್ ಬಿದ್ದಿರುವ ಸರಕಾರ, ಉಳ್ಳವರ ಪರ ಇರುವ ಸರ್ಕಾರ ಎಂದು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಒಂದು ವರ್ಷ ಆದರೂ ಕೆಡಿಪಿ ಸಭೆ ಕರೆದಿಲ್ಲ. ಜಿಲ್ಲೆಯ ಪರಿಸ್ಥಿತಿ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಸುಖಾಸುಮ್ಮನೆ ಅಧಿಕಾರಿಗಳಿಗೆ ಧಮ್ಕಿ ಹಾಕುವುದು ಬಿಡಬೇಕು. ಶೇ.10 ಕೊಟ್ಟರೆ ಏನು ಬೇಕಾದರೂ ಕೆಲಸ ಮಾಡುತ್ತಾರೆ. ಇಂತಹ ಲೂಟಿ ಸರ್ಕಾರವನ್ನು ನಾನು ಎಂದು ನೋಡಿಯೇ ಇಲ್ಲ. ಸರ್ಕಾರದಲ್ಲಿರುವವರು ಲೂಟಿ ಹೊಡೆಯುತ್ತಿದ್ದಾರೆ. ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ನಾನು ನೋಡಿರಲಿಲ್ಲ. ಪ್ರಧಾನಿ ಮೋದಿಯವರು ಸರ್ಕಾರದ ನಡೆ ಗಮನಿಸಬೇಕು ಎಂದು ಹಾಸನದಲ್ಲಿ ಎಚ್ ಡಿ ರೇವಣ್ಣ ಹೇಳಿದ್ದಾರೆ.