ಬೆಳ್ಳಿ ಅಂದ್ರೆ ನಮಗೆ ನೆನಪಿಗೆ ಬರೋದು ಬೆಳ್ಳಿ ದೀಪ, ಬೆಳ್ಳಿ ಬಟ್ಟಲು, ಗೆಜ್ಜೆ, ಕಾಲುಂಗುರ, ಚಿಕ್ಕ ಮಕ್ಕಳ ಬಳೆ ಇತ್ಯಾದಿ. ಇದೇ ಬೆಳ್ಳಿ ಆಭರಣಗಳಿಂದ ನಮ್ಮ ಆರೋಗ್ಯವನ್ನ ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾದ್ರೆ ಬೆಳ್ಳಿಯಿಂದ ಆರೋಗ್ಯ ವೃದ್ಧಿ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಳ್ಳಿಯ ಕಾಲುಂಗುರ, ಗೆಜ್ಜೆ, ಧರಿಸುವುದರಿಂದ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಮತ್ತು ತಂಪಿನ ಪ್ರಮಾಣ ಸಮತೋಲನದಲ್ಲಿರುತ್ತದೆ. ಅದಕ್ಕಾಗಿಯೇ ಹೆಣ್ಣು ಮಕ್ಕಳು ಕಾಲಿಗೆ ಗೆಜ್ಜೆ ಕಟ್ಟಬೇಕು ಅನ್ನೋದು. ನೀವು ಬರೀ ಚಿನ್ನವೇ ಧರಿಸಿದರೆ, ನಿಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳ್ಳಿ ಆಭರಣವನ್ನ ಕೂಡ ಧರಿಸಬೇಕು.
ಇನ್ನು ಬೆಳ್ಳಿ ತಟ್ಟೆಯಲ್ಲಿ ಊಟ ಮತ್ತು ಬೆಳ್ಳಿ ಗ್ಲಾಸಿನಲ್ಲಿ ಹಾಲು ಅಥವಾ ನೀರು ಕುಡಿಯುವುದರಿಂದಲೂ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಎಲ್ಲರಿಗೂ ಬೆಳ್ಳಿ ಬಟ್ಟಲಲ್ಲಿ ಊಟ ಮಾಡುವ ಮತ್ತು ಬೆಳ್ಳಿ ಗ್ಲಾಸಿನಲ್ಲಿ ಹಾಲು ಕುಡಿಯುವಷ್ಟು ಅನುಕೂಲವಿರುವುದಿಲ್ಲ. ಆದ್ರೆ ಬೆಳ್ಳಿ ಬಟ್ಟಲು ಮತ್ತು ಗ್ಲಾಸ್ ಬಳಸುವುದರಿಂದ ಆರೋಗ್ಯ ಅಭಿವೃದ್ಧಿಯಾಗುತ್ತದೆ.
ಅಲ್ಲದೇ ಬೆಳ್ಳಿ ಪಾತ್ರೆಯಲ್ಲಿ ಭೋಜನ ಮಾಡುವುದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಇದರಿಂದ ನಾವು ಹಲವು ತರಹದ ರೋಗಗಳಿಂದ ಮುಕ್ತಿ ಪಡೆಯಬಹುದು. ನೆನಪಿನ ಶಕ್ತಿ ಹೆಚ್ಚಿಸುವುದಕ್ಕೂ ಬೆಳ್ಳಿ ಬಟ್ಟಲು ಸಹಕಾರಿ. ಬೆಳ್ಳಿ ಬಟ್ಟಲಲ್ಲಿ ಊಟ ಮಾಡುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ.