Health News: ಸಾವು ಯಾರಿಗೆ ಬರಲ್ಲಾ ಹೇಳಿ..? ಹುಟ್ಟಿರುವ ಪ್ರತಿಯೊಂದು ಜೀವಿಗೂ, ಜೀವಕ್ಕೂ ಸಹ ಸಾವಿದೆ. ಆದರೆ ಆ ಸಾವು ಬರಲು ನಾನಾ ಕಾರಣಗಳಿವೆ, ಅಲ್ಲದೆ ಒಬ್ಬೊಬ್ಬರಿಗೂ ಬೇರೆ ಬೇರೆಯದ್ದೆ ಸಮಸ್ಯೆಗಳಿರುತ್ತವೆ. ಆದರೆ ಈ ಸಾವಿನ ವಿಚಾರದಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿರುವ ವರದಿಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ ನಾಗರಿಕ ಸಮಾಜದಲ್ಲಿ ಸಂಭವಿಸುತ್ತಿರುವ ಸಾವುಗಳ ಬಗ್ಗೆ ಹಲವು ಆತಂಕಕಾರಿಯಾದ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ.
ಇನ್ನೂ ಗ್ಲೋಬಲ್ ಬರ್ಡನ್ ಡಿಸೀಸ್ ಸಂಸ್ಥೆಯ ಅಧ್ಯಯನದ ಪ್ರಕಾರ ಹೊರಬಿದ್ದ ಮಾಹಿತಿ ಇದಾಗಿದೆ. ವಿಶ್ವ ಸಂಸ್ಥೆಯ ತೀರ್ಮಾನದಂತೆ ಪ್ರತಿವರ್ಷ ಏಪ್ರಿಲ್ 7 ಇಂದು ಜಾಗತಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಇಂದಿನ ಹೆಲ್ತ್ ಡೇಯಂದೇ ಈ ವರದಿಯು ಕೆಲವು ಪ್ರಮುಖ ಸಂಗತಿಗಳನ್ನು ಬಯಲಿಗೆಳೆದಿದೆ. ಪ್ರಮುಖವಾಗಿ ನಾವು ಕಳೆದುಕೊಂಡ ಹಣ, ಒಡವೆ ಹಾಗೂ ಸಂಪತ್ತನ್ನು ಗಳಿಸಬಹುದು ಆದರೆ ಆರೋಗ್ಯವನ್ನಲ್ಲ ಎನ್ನುವುದು ಅಕ್ಷರಶಃ ನೂರಕ್ಕೆ ನೂರರಷ್ಟು ಇದರಿಂದ ಸತ್ಯವಾಗಿದೆ. ಅಂದಹಾಗೆ ವಿಶ್ವದ 821 ಕೋಟಿ ಇರುವ ಜನಸಂಖ್ಯೆಯಲ್ಲಿ ಶೇಕಡಾ 4.3 ಜನರಷ್ಟೇ ಸಮಗ್ರ ಆರೋಗ್ಯದಿಂದ ಜೀವಿಸುತ್ತಿದ್ದಾರೆ. ಇನ್ನುಳಿದ 95.70ರಷ್ಟು ಮಂದಿ ಒಂದಲ್ಲ ಒಂದು ಬಗೆಯ ಕಾಯಿಲೆಯಿಂದ ದಿನಗಳನ್ನು ದೂಡುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
4.1 ಕೋಟಿ ಜನರ ಬಲಿ..!
ಅಲ್ಲದೆ ಜೀವಿಯ ದೈಹಿಕ, ಮಾನಸಿಕ. ಸಾಮಾಜಿಕ ಸುಸ್ಥಿತಿ ಹಾಗೂ ಸಮತೋಲನಗಳೇ ನಿಜವಾದ ಆರೋಗ್ಯವಾಗಿದೆ. ಈ ಕಾರಣಕ್ಕಾಗಿಯೇ ಆರೋಗ್ಯವೇ ಭಾಗ್ಯ ಎಂದು ಕರೆಯಲಾಗುತ್ತದೆ. ಇನ್ನೂ ಜಗತ್ತಿನಲ್ಲಿ ಪ್ರತಿವರ್ಷ 4.1 ಕೋಟಿ ಮಂದಿ ಅನೇಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವದ ದೇಶಗಳಲ್ಲಿ ಒಟ್ಟು 97.5 ಕೋಟಿ ಜನರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಷ್ಟೇ ಅಲ್ಲದೆ ವೇಳೆಗೆ ಸರಿಯಾಗಿ ಲಸಿಕೆ ಹಾಕದ ಕಾರಣ ಪ್ರತಿವರ್ಷ 15 ಲಕ್ಷ ಮಕ್ಕಳು ಅಸುನೀಗುತ್ತಿವೆ ಎಂಬ ಕಳವಳಕಾರಿ ಮಾಹಿತಿಯು ವರದಿಯಲ್ಲಿ ಗೊತ್ತಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಭಾರತದ ವೆಚ್ಚ ಎಷ್ಟು..?
ಅಂದಹಾಗೆ ತಮ್ಮ ದೇಶವಾಸಿಗಳಿಗೆ ಸೂಕ್ತ ಭದ್ರತೆ ಹಾಗೂ ಆರೋಗ್ಯ ಸುರಕ್ಷತೆ ನೀಡುವ ಪ್ರಮಾಣದಲ್ಲಿ ಸಿಂಗಾಪುರ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಇವು ಕ್ರಮವಾಗಿ ಮೂರು ಸ್ಥಾನಗಳಲ್ಲಿವೆ. ಭಾರತವು 195 ದೇಶಗಳ ಸಾಲಲ್ಲಿ 66ನೇ ಸ್ಥಾನ ಪಡೆದಿದೆ. ಅಚ್ಚರಿಯೆಂದರೆ ಭಾರತವು ತನ್ನ ಜಿಡಿಪಿಯ ಕೇವಲ ಶೇಕಡಾ 3.8ರಷ್ಟು ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕಾಗಿ ಖರ್ಚು ಮಾಡುತ್ತಿದೆ.
ಭಾರತೀಯರಿಗೆ ದೈಹಿಕ ಚಟುವಟಿಕೆ ಕೊರತೆ..!
ಇನ್ನೂ ಪ್ರಮುಖವಾಗಿ ಭಾರತೀಯ ಯುವ ಸಮೂಹದ ಕುರಿತು ವರದಿಯು ಬೆಚ್ಚಿ ಬೀಳಿಸುವ ಸಂಗತಿ ಬಯಲು ಮಾಡಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಬದಲಾದ ಜೀವನ ಶೈಲಿ, ದೈನಂದಿನ ಕೆಲಸದೊತ್ತಡದ ಪರಿಣಾಮ ಇವುಗಳಿಂದ ವಯಸ್ಕ ಭಾರತೀಯರು ಶೇಕಡಾ 49.40ರಷ್ಟು ಜನ ದೈಹಿಕ ಚಟುವಟಿಕೆ ಮಾಡದಿರುವುದು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತಿದೆ. 2000ದಲ್ಲಿ ಶೇಕಡಾ 22.30ರಷ್ಟು ಭಾರತೀಯರಿಗೆ ದೈಹಿಕ ಚಟುವಟಿಕೆ ಕೊರತೆಯಿದ್ದರೆ, 2024ರಲ್ಲಿ ಇದು ಶೇಕಡಾ 49.4ಕ್ಕೆ ಏರಿಕೆಯಾಗಿದೆ. ಅಲ್ಲದೆ ತಜ್ಞರ ಪ್ರಕಾರ ಶೇಕಡಾ 60ರಷ್ಟು ಈ ಪ್ರಮಾಣವು ಮುಂದಿನ 2023ರ ವೇಳೆಗೆ ಹೆಚ್ಚಾಗಲಿದೆ, ಇನ್ನಷ್ಟು ಜನರು ನಾನಾ ರೀತಿಯ ರೋಗಗಳಿಗೆ ತುತ್ತಾಗಲಿದ್ದಾರೆ ಎನ್ನುವ ಎಚ್ಚರಿಕೆಯನ್ನು ವರದಿಯು ನೀಡಿದೆ.
ಜಗತ್ತಿನ ಯಾವ್ಯಾವ ದೇಶಗಳು ಆರೋಗ್ಯಕರವಾಗಿವೆ..?
ಪ್ರಮುಖವಾಗಿ ಜಾಗತಿಕವಾಗಿ ತಮ್ಮ ಜನರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಬಗ್ಗೆ ನೋಡಿದಾಗ ಒಂದೊಂದರಲ್ಲೂ ಸಹ ವ್ಯತ್ಯಾಸ ಕಂಡು ಬಂದಿದೆ. ಅಂದಹಾಗೆ ಅಲ್ಲಿನ ಜೀವಿತಾವಧಿಯು ಸಹ ಅಷ್ಟೇ ಬದಲಾವಣೆಯನ್ನು ಹೊಂದಿದೆ. ನಾರ್ವೆ ದೇಶದಲ್ಲಿ 83.46 ವರ್ಷಗಳಷ್ಟು ಒಬ್ಬ ಮಾನವನ ಜೀವಿತಾವಧಿಯಾಗಿದೆ, ಸ್ವಿಡ್ಜರ್ಲೆಂಡ್‌ನಲ್ಲಿ 84.99 ವರ್ಷ, ಫಿನ್ಲೆಂಡ್‌ನಲ್ಲಿ 82.08 ವರ್ಷ, ಆಸ್ಟ್ರೇಲಿಯಾ 84.07 ವರ್ಷ, ಸ್ವೀಡನ್ 83.42 ವರ್ಷ, ಐಸ್‌ಲೆಂಡ್ 83.01, ಲುಕ್ಸೆಂಬರ್ಗ್82.36, ಸ್ಪೇನ್ 83.80, ಜಪಾನ್ 84.85 ವರ್ಷ ಹಾಗೂ ಬ್ರಿಟನ್ ದೇಶದಲ್ಲಿ 81.45 ವರ್ಷಗಳಷ್ಟು ಜೀವಿತಾವಧಿ ಇದೆ ಎಂದು ಅಧ್ಯಯನ ವರದಿಯು ತಿಳಿಸಿದೆ.
ಸುಗಮ ಆರೋಗ್ಯಕ್ಕೇನು ಮಾಡಬೇಕು..?
ಸಮತೋಲನದ ಆಹಾರ ಪದ್ಧತಿ ಅನುಸರಣೆ, ವಾರಕ್ಕೆ 150 ನಿಮಿಷಗಳ ನಡಿಗೆ ಹಾಗೂ ವ್ಯಾಯಾಮ, ದಿನ ನಿತ್ಯ 7 ರಿಂದ 8 ಗಂಟಗಳ ಗಡದ್ದು ನಿದ್ದೆ, ಧೂಮಪಾನ ಹಾಗೂ ಮಧ್ಯಪಾನದಿಂದ ದೂರ ಇರುವುದು, ಮಾನಸಿಕ ಆರೋಗ್ಯ ಕ್ಷಮತೆ, ವೈಯಕ್ತಿಕ ಸ್ವಚ್ಚತೆ ಹಾಗೂ ಅಧಿಕ ನೀರು ಸೇವನೆಯಿಂದ ಅನಾರೋಗ್ಯವನ್ನು ತಪ್ಪಿಸಬಹುದಾಗಿದೆ ಎನ್ನುವುದು ವರದಿಯ ಸಾರವಾಗಿದೆ.
ಒಟ್ನಲ್ಲಿ… ಇಷ್ಟು ದಿನ ನಮ್ಮ ಸುತ್ತಮುತ್ತಲಿನ ಸಾವು – ನೋವುಗಳ ಬಗ್ಗೆ ಮಾಹಿತಿಯನ್ನು ಕಂಡು ಆ ಕ್ಷಣವಷ್ಟೇ ಅದರ ಬಗ್ಗೆ ಬೇಸರ ವ್ಯಕ್ತಪಡಿಸಿ ಬಳಿಕ ಯಥಾವತ್ತಾಗಿ ಜೀವನ ಶೈಲಿಯ ಕಡೆಗೆ ಗಮನ ನೀಡುತ್ತಿದ್ದೇವು. ಆದರೆ ಇದೀಗ ಇಡೀ ಪ್ರಪಂಚದ ಸಾವಿನ ವಿವರದ ಜೊತೆಗೆ ಆ ಸಾವಿಗೆ ಕಾರಣಗಳ ಕುರಿತು ನಮಗೆ ತಿಳಿದಿದೆ. ಪ್ರಮುಖವಾಗಿ ಜಾಗತಿಕ ಮಟ್ಟದಲ್ಲಿ ಭಾರತೀಯರ ಆರೋಗ್ಯದ ವಿಚಾರದಲ್ಲಿ ವರದಿಯು ಆಘಾತಕಾರಿ ಅಂಶಗಳನ್ನು ಹೊರಗೆಡವಿದೆ. ಅದೇನೆ ಇರಲಿ.. ಇಷ್ಟು ದಿನ ಏನಾಗಿದೆಯೋ ಅದರ ಬಗ್ಗೆ ಯೋಚಿಸದೆ ಇನ್ನಾದರೂ ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಪ್ರತಿದಿನ ವ್ಯಾಯಮ, ದೈಹಿಕ ಶ್ರಮದ ಧ್ಯಾನದ ಜೊತೆಗೆ ಮಾನಸಿಕ ಒತ್ತಡಗಳನ್ನು ನಿವಾರಿಸಬೇಕಿದೆ. ಅಂದಾಗ ಮಾತ್ರ ನಾವು ಆರೋಗ್ಯಯುತವಾಗಿ ಜೀವಿಸಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.