Health Tips: ನೆನಪಿನ ಶಕ್ತಿ ಹೆಚ್ಚಾಗಬೇಕು. ಓದಿದ್ದು ನೆನಪಿನಲ್ಲಿ ಉಳಿಯಬೇಕು ಅಂದ್‌ರೆ ಹೆಚ್ಚಾಗಿ ಸಿಗುವ ಸಲಹೆ ಅಂದ್ರೆ, ನೆನೆಸಿದ ಬಾದಾಮಿಯನ್ನು ತಿನ್ನಬೇಕು ಅಂತಾ. ಆದ್ರೆ ಬಾದಾಮಿ ಒಂದೇ ಅಲ್ಲ. ಇನ್ನೊಂದು ಆಹಾರ ಸೇವನೆಯಿಂದಲೂ ನೀವು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದನ್ನು ಬರೀ ವಿದ್ಯಾರ್ಥಿಗಳಷ್ಟೇ ಅಲ್ಲ. ಮರೆವಿನ ಖಾಯಿಲೆ ಇರುವ ಯಾರೂ ಬೇಕಾದ್ರೂ ಸೇವಿಸಬಹುದು. ಅದೇನು ಅಂತಾ ತಿಳಿಯೋಣ ಬನ್ನಿ.
ಸರಸ್ವತಿ ಎಲೆ, ತಿಮರೆ, ಒಂದೆಲಗ, ಬ್ರಾಹ್ಮಿ ಎಲೆ ಎಂದು ಇದನ್ನು ಕರೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ತಿಮರೆ ಎಲೆಯನ್ನು ತಿಂದರೆ, ನಿಮ್ಮ ನೆನಪಿನ ಶಕ್ತಿ ಅತ್ಯುತ್ತಮವಾಗಿರುತ್ತದೆ. ಅದರಲ್ಲೂ ಪುಟ್ಟ ಮಕ್ಕಳಿರುವಾಗಲೇ, ನಿಮ್ಮ ಮಕ್ಕಳಿಗೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೀವು ಒಂದೆಲಗದ ಒಂದು ಎಲೆ ಅಥವಾ, ಅದರ ರಸ ಸೇವಿಸಲು ಕೊಡಬೇಕು.
ಇದರಿಂದ ಮಕ್ಕಳು ಅದೆಷ್ಟು ಶಾರ್ಪ್ ಆಗುತ್ತಾರೆ ಅಂದ್ರೆ, ಒಮ್ಮೆ ಓದಿದ್ದು ಕರೆಕ್ಟ್ ಆಗಿ ನೆನಪಿರುತ್ತದೆ. ಮತ್ತು ಅಂಥ ಮಕ್ಕಳು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುತ್ತಾರೆ. ಬುದ್ಧಿವಂತರಾಗುತ್ತಾರೆ ಎಂದು ಪ್ರೂವ್ ಆಗಿದೆ. ಹಾಗಾಗಿ ತಿಮರೆಯನ್ನು ಸರಸ್ವತಿ ಎಲೆ ಅಂತಲೇ ಕರೆಯುತ್ತಾರೆ.
ಇನ್ನು ಬ್ರಾಹ್ಮಿ ಎಲೆಯನ್ನು ಬರೀ ಹಾಗೆ ತಿನ್ನಲಾಗದಿದ್ದರೆ, ವಾರಕ್ಕೆ ಮೂರು ಬಾರಿ ನೀವು ಒಂದೆಲಗವನ್ನು ಬಳಸಿ, ಚಟ್ನಿ, ತಂಬುಳಿ ಮಾಡಿ ತಿನ್ನಬಹುದು. ಇದು ತಿನ್ನಲು ರುಚಿಕರವಾಗಿರುವುದರ ಜೊತೆಗೆ, ಆರೋಗ್ಯಕರವೂ ಮತ್ತು ನೆನಪಿನ ಶಕ್ತಿ ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿರುತ್ತದೆ. ಅಲ್ಲದೇ, ದೇಹಕ್ಕೆ ತಂಪು ನೀಡುವ ಈ ಎಲೆಯ ಪದಾರ್ಥ ಸೇವನೆಯಿಂದ ಉಷ್ಣತೆಯ ಸಮಸ್ಯೆ ದೂರಾಗುತ್ತದೆ.
ಇನ್ನು ನಿಮಗೆ ಮಾನಸಿಕ ಒತ್ತಡ ಉಂಟಾಗುತ್ತಿದೆ. ಕೆಲಸದಲ್ಲಿ, ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲದೇ, ಮಾನಸಿಕ ಹಿಂಸೆಯಾಗುತ್ತಿದ್ದರೆ. ಒಂದೆಲಗದಿಂದ ಪದಾರ್ಥ ಮಾಡಿ ಸೇವಿಸಿ. ಇದು ಮಾನಸಿಕ ಹಿಂಸೆ ಕಡಿಮೆ ಮಾಡಿ, ಮೆದುಳಿನ ಆರೋಗ್ಯ ಸುಧಾರಿಸುತ್ತದೆ.
ಇನ್ನು ಒಂದೆಲಗದ ಪದಾರ್ಥ ಹೇಗೆ ಮಾಡುವುದು ಎಂದರೆ, ಒಂದೆಲಗದ ಎಲೆ, ಉಪ್ಪು, ಹಸಿಮೆಣಸು ಅಥವಾ ಒಣಮೆಣಸು ಇವಿಷ್ಟನ್ನು ಹಾಕಿ ರುಬ್ಬಿದರೆ, ಚಟ್ನಿ ರೆಡಿ. ಇದಕ್ಕೆ ಮಜ್ಜಿಗೆ ಅಥವಾ ಮೊಸರು ಸೇರಿಸಿದರೆ, ತಂಬುಳಿ ರೆಡಿ. ಇದಕ್ಕೆ ಒಗ್ಗರಣೆ ಹಾಕಿ, ಊಟದೊಂದಿಗೆ ಸವಿಯಬಹುದು.