ರಾಜ್ಯದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಇದ್ದು, ಬಿರುಗಾಳಿಯೊಂದಿಗೆ ಗುಡುಗು-ಮಿಂಚು ಸಹಿರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 27 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಕ್ಟೋಬರ್ 27ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45ರಿಂದ 55ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಈ ಸಮಯದಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಮತ್ತು ದೈತ್ಯಾಕಾರದ ಅಲೆಗಳು ಎಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಇದರ ನೇರ ಪರಿಣಾಮ ಕರ್ನಾಟಕದ ಮೇಲೆ ಬಿದ್ದಿದೆ. ಇದರ ಪರಿಣಾಮದಿಂದ ಮುಂದಿನ 10 ದಿನಗಳ ಕಾಲ ನಿರಂತರ ಭಾರೀ ಮಳೆಯಾಗಲಿದೆಯಂತೆ. ಇನ್ನು, ಅಕ್ಟೋಬರ್ 29ರವರೆಗೆ ಶೀತಗಾಳಿ, ಮೋಡಕವಿದ ವಾತಾವರಣ ಮುಂದುವರೆಯಲಿದೆ.
ತಮಿಳುನಾಡಿನಲ್ಲೂ ಚಂಡಮಾರುತದ ಪ್ರಭಾವ ಹೆಚ್ಚಾಗಿದೆ. ಹೀಗಾಗಿ ವಿವಿಧ ಭಾಗಗಳಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಚೆನ್ನೈನಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ರಶ್ಮಿಕಾ ಸಿದ್ಧಾರ್ಥ್ ಆದೇಶಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ವಿಲ್ಲುಪುರಂ, ರಾಣಿಪೇಟೆ, ತೂತುಕುಡಿ, ಪುದುಚೇರಿ, ಕಾರೈಕಲ್‌ನಲ್ಲೂ ಶಾಲಾ ಕಾಲೇಜುಗಳನ್ನೂ ಕ್ಲೋಸ್ ಮಾಡಲಾಗಿದೆ.
ಚೆನ್ನೈನ ಮರೀನಾ ಸಮುದ್ರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ಈಶಾನ್ಯ ಮಾನ್ಸೂನ್ ಚುರುಕುಗೊಂಡಿದ್ದು, ಕರಾವಳಿ ಭಾಗದ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ತಮಿಳುನಾಡಿನಲ್ಲೂ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ನೀಡಲಾಗಿದೆ. ಸಿಎಂ ಸ್ಟಾಲಿನ್, ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

