Political News: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲಿನ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಅವರು ತಮ್ಮ ಸ್ಥಾನವನ್ನು ತ್ಯಜಸಿದ್ದಾರೆ. ಆಡಳಿತಾರೂಢ ಡಿಎಂಕೆಯ ವಿರುದ್ಧ ಗೆದ್ದು ಅಧಿಕಾರವನ್ನು ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಯು ಇದೀಗ ಅಣ್ಣಾಮಲೈ ರಾಜೀನಾಮೆ ಪಡೆಯುವ ಮೂಲಕ ದೊಡ್ಡ ತಂತ್ರವನ್ನೇ ಹೆಣೆದಿದೆ ಎನ್ನಲಾಗುತ್ತಿದೆ.
ಇನ್ನೂ ಈ ಕುರಿತು ಕೊಯಮುತ್ತೂರಿನಲ್ಲಿ ಮಾತನಾಡಿರುವ ಅವರು, ರಾಜ್ಯ ಬಿಜೆಪಿ ನಾಯತ್ವದಲ್ಲಿ ನಾನಿಲ್ಲ, ಮುಂದಿನ ಅಧ್ಯಕ್ಷರನ್ನು ವರಿಷ್ಠರೇ ನಿರ್ಧಾರ ಮಾಡುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ರಾಜೀನಾಮೆಯನ್ನು ಬಹಿರಂಗ ಪಡಿಸಿದ್ದಾರೆ. ಇನ್ನೂ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಮೈದಾನದ ಸಿದ್ದತೆ ಮಾಡಿಕೊಳ್ಳುತ್ತಿರುವ ಬಿಜೆಪಿಯು ತನ್ನ ಮೊದಲ ಹೆಜ್ಜೆಯಾಗಿ ರಾಜ್ಯ ಘಟಕದಲ್ಲಿ ಬದಲಾವಣೆ ಮಾಡಿದೆ. ಅಲ್ಲದೆ ಸ್ಟಾಲಿನ್ ಆಡಳಿತಕ್ಕೆ ಟಕ್ಕರ್ ಕೊಡಲು ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಅನಿವಾರ್ಯ ಎನ್ನುವುದನ್ನು ಮನಗಂಡ ಬಿಜೆಪಿ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ.
ಅಣ್ಣಾಮಲೈ ಪ್ರಭಾವ ತಗ್ಗಿಸಿ ಎಂದಿದ್ದ ಎಡಪ್ಪಾಡಿ..
ಅಂದಹಾಗೆ ಕಳೆದ ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿದ್ದ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ನಿಯೋಗವು ಅಣ್ಣಾಮಲೈ ಅವರ ಪ್ರಭಾವವನ್ನು ತಗ್ಗಿಸಬೇಕು. ಅವರನ್ನು ಸ್ವಲ್ಪ ದೂರ ಇಡಬೇಕು, ಬಿಜೆಪಿಯು ಅಷ್ಟೊಂದು ಜನರನ್ನು ತಲುಪಿಲ್ಲ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಇನ್ನೂ ಸಹ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಿಸಿಲ್ಲ. ಹೀಗಾಗಿ ತಮ್ಮ ನೇತೃತ್ವದಲ್ಲಿಯೇ ಈ ಚುನಾವಣೆ ನಡೆಯಬೇಕು. ಹೆಚ್ಚಿನ ಪ್ರಾಮುಖ್ಯತೆ ಎಐಎಡಿಎಂಕೆಗೆ ನೀಡಬೇಕು ಎಂಬ ಷರತ್ತನ್ನು ನಿಯೋಗ ವಿಧಿಸಿತ್ತು. ಇದನ್ನು ಕೇಳಿದ್ದ ಬಿಜೆಪಿ ನಾಯಕರು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದ್ದರು.
ನಾಗೇಂದ್ರನ್, ತಮಿಳಿಸೈ ಸೌಂದರರಾಜನ್ ರೇಸ್‌ನಲ್ಲಿ..
ಮುಖ್ಯವಾಗಿ ಎಐಎಡಿಎಂಕೆ ರಾಜ್ಯಾಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಅವರು ಗೌಂಡರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ಅಣ್ಣಾಮಲೈ ಕೂಡ ಅದೇ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಥೆವಾರ್ ಸಮುದಾಯಕ್ಕೆ ಸೇರಿದ ಸಂಸದ ನೈನಾರ್ ನಾಗೇಂದ್ರನ್ ಅವರಿಗೆ ತಮಿಳುನಾಡು ಬಿಜೆಪಿಯ ಸಾರಥ್ಯವನ್ನು ನೀಡುವ ಲಕ್ಷಣಗಳು ದಟ್ಟವಾಗಿವೆ. ಈಗಾಗಲೇ ಈ ಕುರಿತು ಹೈಕಮಾಂಡ್ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ತಮಿಳುನಾಡು ಬಿಜೆಪಿ ಸಂಘಟನಾ ಚತುರ ಕರುಪ್ಪು ಮುರುಗನಂದನಮ್ ಅವರುಗಳ ಹೆಸರೂ ಸಹ ರೇಸ್‌ನಲ್ಲಿದೆ. ಇನ್ನೂ ತಮಿಳುನಾಡು ಬಿಜೆಪಿಗೆ ನೂತನ ಅಧ್ಯಕ್ಷರನ್ನು ಹೈಕಮಾಂಡ್ ನಾಯಕರು ಏಪ್ರಿಲ್ 9ರಂದು ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.,
ಅಣ್ಣಾಮಲೈ ಮುಂದೇನು..?
ಅಂದಹಾಗೆ ರಾಜೀನಾಮೆಯ ಬಳಿಕ ಅಣ್ಣಾಮಲೈ ಅವರಿಗೆ ಬಿಜೆಪಿ ಹೈಕಮಾಂಡ್ ಉನ್ನತ ಜವಾಬ್ದಾರಿ ನೀಡುತ್ತದೆ ಎಂಬ ಚರ್ಚೆಗಳು ನಡೆದಿವೆ. ಯಾಕೆಂದರೆ ಈಗಾಗಲೇ ತಮಿಳುನಾಡಿನಲ್ಲಿ ಸುತ್ತಾಡಿ ಬಿಜೆಪಿಯನ್ನು ಕಟ್ಟುವ ಕೆಲಸ ಮಾಡಿರುವ ಅಣ್ಣಾಮಲೈ ಅವರ ಕಾರ್ಯದಕ್ಷತೆ ಹಾಗೂ ಪಕ್ಷ ನಿಷ್ಠೆ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ತೃಪ್ತಿ ತಂದಿದೆ. ಅಲ್ಲದೆ ಈ ಉಭಯ ನಾಯಕರು ಮೆಚ್ಚುವ ಯುವಕರಲ್ಲಿ ಅಣ್ಣಾಮಲೈ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ಒಪ್ಪದ ಹೈಕಮಾಂಡ್, ಅವರಿಗೆ ದೇಶದ ಯಾವುದಾದರೂ ಒಂದು ರಾಜ್ಯದ ಉಸ್ತುವಾರಿ ನೀಡುವ ಚಿಂತನೆ ನಡೆಸಿದೆ. ಈ ಮೂಲಕ ಪಕ್ಷದ ಕಾರ್ಯಗಳಲ್ಲಿ ಅಣ್ಣಾಮಲೈ ಅವರನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಯೋಚಿಸಿದೆ.
ಡಿಎಂಕೆ ಗುಮ್ಮಲು ಬಿಗ್ ಪ್ಲಾನ್..
ಅಲ್ಲದೆ ಪ್ರಮುಖವಾಗಿ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುತ್ತಲೇ ಬರುತ್ತಿರುವ ಡಿಎಂಕೆಯು, ಇದೀಗ ಡಿಲಿಮಿಟೇಷನ್, ತ್ರಿಭಾಷಾ ಸೂತ್ರಕ್ಕೆ ಅಡ್ಡಗಾಲು ಹಾಕುತ್ತಿರುವುದನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿಯೇ ಎಐಎಡಿಎಂಕೆ ಜೊತೆ ಸಖ್ಯ ಬೆಳೆಸಿ ಡಿಎಂಕೆಗೆ ಪಾಠ ಕಲಿಸಲು ಬಿಜೆಪಿ ಮುಂದಾಗಿದೆ. ಹೀಗಾಗಿ ಎಐಎಡಿಎಂಕೆ ಷರತ್ತಿಗೆ ತಲೆಯಾಡಿಸಿ ಅಣ್ಣಾಮಲೈ ಅವರಿಗೆ ಕೊಕ್ ನೀಡಲು ಬಿಜೆಪಿ ಹೈಕಮಾಂಡ್ ಈ ಮೊದಲೇ ನಿರ್ಧಿರಿಸಿತ್ತು. ಅಂತಿಮವಾಗಿ ಇದೀಗ ದಿಲ್ಲಿ ನಾಯಕರ ಸೂಚನೆ ಮೇರೆಗೆ ಅಣ್ಣಾಮಲೈ ತಮ್ಮ ಸ್ಥಾನ ತೊರೆದಿದ್ದಾರೆ.