Monday, March 24, 2025

Latest Posts

ಅತ್ಯಾಚಾರ ಕುರಿತ ಹೈಕೋರ್ಟ್‌ ತೀರ್ಪು ; ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಆಕ್ರೋಶವೇಕೆ..?

- Advertisement -

National News: ಸ್ತನಗಳನ್ನು ಹಿಡಿಯುವುದು ಅಥವಾ ಪ್ಯಾಂಟ್ ಎಳೆಯುವಂತಹ ಕೃತ್ಯಗಳು ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನವಲ್ಲ ಎಂದು ಇತ್ತೀಚಿಗಷ್ಟೇ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಆದರೆ ಇದೀಗ ಇದಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಅನ್ನಪೂರ್ಣಾ ದೇವಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಅಲಹಾಬಾದ್‌ ಕೋರ್ಟ್‌ ನೀಡಿರುವ ತೀರ್ಪಿಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಲೋಕಸಭೆಯ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ತೀರ್ಪನ್ನು ನಾನು ಒಪ್ಪಲು ಸಾಧ್ಯವಿಲ್ಲ, ಇದರ ವಿರುದ್ಧವೇ ನಾನು ಅಭಿಪ್ರಾಯವನ್ನು ಹೊಂದಿದ್ದೇನೆ. ಈ ಕೂಡಲೇ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸಭ್ಯ ನಾಗರಿಕ ಸಮಾಜದಲ್ಲಿ ಇಂತಹ ಆಕ್ಷೇಪಾರ್ಹ ತೀರ್ಪುಗಳಿಗೆ ಯಾವುದೇ ಜಾಗವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ರೀತಿಯ ನಿಲುವುಗಳಿಂದ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಕಳವಳ ಹೊರಹಾಕಿದ್ದಾರೆ. ಈ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಂಡು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಮಹತ್ವದ ಚರ್ಚೆ ನಡೆಸುತ್ತೇವೆ. ಇಂಥ ತೀರ್ಪಿನಿಂದ ದೇಶದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅನ್ನಪೂರ್ಣಾ ದೇವಿ ತಿಳಿಸಿದ್ದಾರೆ.

ನಾಚಿಕೆಗೇಡಿನ ಸಂಗತಿ..

ಇನ್ನೂ ನ್ಯಾಯಾಲಯದ ತೀರ್ಪು ದುರದೃಷ್ಟಕರ ಮತ್ತು ಆಘಾತಕಾರಿಯಾಗಿದೆ. ಆರೋಪಿ ಮಾಡಿದ ಕೃತ್ಯವನ್ನು ಅತ್ಯಾಚಾರವೆಂದು ಹೇಗೆ ಪರಿಗಣಿಸಲಾಗುವುದಿಲ್ಲ..? ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಕೂಡಲೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ದೆಹಲಿ ಡಿಸಿಡಬ್ಲ್ಯೂನ ಮಾಜಿ ಮುಖ್ಯಸ್ಥೆ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರೂ ಸಹ ಅಲಹಾಬಾದ್‌ ನ್ಯಾಯಾಲಯದ ತೀರ್ಪನ್ನು ಖಂಡಿಸಿದ್ದಾರೆ.

ಪ್ರಕರಣ ಏನಿದು..?

ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ 11 ವರ್ಷದ ಬಾಲಕಿಯ ಮೇಲೆ 2021 ರಲ್ಲಿ ಪವನ್ ಮತ್ತು ಆಕಾಶ್ ಎಂಬ ಇಬ್ಬರು ಪುರುಷರಿಂದ ಹಲ್ಲೆ ನಡೆಸಿದ್ದ ಪ್ರಕರಣವಿದು. ಇನ್ನೂ ಈ ಕುರಿತು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಸಂತ್ರಸ್ತೆಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರದ ಯತ್ನ ಆಗುವುದಿಲ್ಲ ಎಂದು ಹೇಳಿತ್ತು. ಆರೋಪಿಯು ಆಕೆಯ ಎದೆಯನ್ನು ಹಿಡಿದು, ಪೈಜಾಮ ದಾರವನ್ನು ಹರಿದು, ಮೋರಿಯ ಕೆಳಗೆ ಎಳೆಯಲು ಪ್ರಯತ್ನಿಸಿದಾಗ, ಆಕೆಯ ಕಿರುಚಾಟ ಕೇಳಿ ದಾರಿಹೋಕರು ಮಧ್ಯಪ್ರವೇಶಿಸಿದಾಗ, ಹಲ್ಲೆಕೋರರು ಓಡಿಹೋಗಿದ್ದರು.

ಇನ್ನೂ ಆರೋಪಿಗಳ ವಿರುದ್ಧ ಪ್ರಕರಣದಲ್ಲಿ ಸಾಕ್ಷಿಗಳ ಆಧಾರದ ಮೇಲೆ, ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ಸಾಬೀತಾಗುವುದಿಲ್ಲ. ಸ್ತನ ಮುಟ್ಟುವುದು – ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಪೀಠ ಹೇಳಿತ್ತು. ಅಲ್ಲದೆ ಪಕ್ಷಾತೀತವಾಗಿ ಈ ತೀರ್ಪಿನ ವಿರುದ್ಧ ದಿನಕಳೆದಂತೆ ವ್ಯಾಪಕ ಆಕ್ರೋಶ, ವಿರೋಧ ಹಾಗೂ ಖಂಡನೆಗಳು ವ್ಯಕ್ತವಾಗುತ್ತಿವೆ. ಅಲ್ಲದೆ ಭಾರತೀಯ ಪ್ರಮುಖ ವಕೀಲೆ ಇಂದಿರಾ ಜೈಸಿಂಗ್ ಕೂಡ ಈ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕೆಂದು ಎಕ್ಸ್‌ ನಲ್ಲಿ ಒತ್ತಾಯಿಸಿದ್ದಾರೆ.

- Advertisement -

Latest Posts

Don't Miss