International News: ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾಗಿನಿಂದಲೂ ನಿರಂತರ ಒಂದಿಲ್ಲೊಂದು ವಿವಾದಾತ್ಮಕ ಹಾಗೂ ಆಘಾತಕಾರಿ ನಿರ್ಧಾರಗಳಿಂದ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗತ್ತಲೇ ಇದ್ದಾರೆ. ಅಲ್ಲದೆ ಇದೀಗ ಅದೇ ರೀತಿಯಾದ ಮತ್ತೊಂದು ಬೃಹತ್ ತೀರ್ಮಾನ ಕೈಗೊಂಡಿರುವ ಅವರು ಅಮೆರಿಕದಲ್ಲಿಯ ಶಿಕ್ಷಣ ಇಲಾಖೆಯನ್ನೇ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಟ್ರಂಪ್ ಅವರ ಈ ನಿರ್ಧಾರ ಇಡೀ ದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಇನ್ನೂ ತಮ್ಮ ದೇಶದಲ್ಲಿನ ಶಿಕ್ಷಣ ಇಲಾಖೆಯನ್ನು ಮುಚ್ಚುವ ಆದೇಶಕ್ಕೆ ಮಕ್ಕಳ ಮುಂದೆಯೇ ಕುಳಿತು ಈಗಾಗಲೇ ಸಹಿ ಹಾಕುವ ಮೂಲಕ ಟ್ರಂಪ್ ಬೃಹತ್ ಹೆಜ್ಜೆಯನ್ನು ಇಟ್ಟಿದ್ದಾರೆ. ಅಲ್ಲದೆ ಆಗಾಗ ಶಿಕ್ಷಣ ಇಲಾಖೆಯ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದರು. ಇನ್ನೂ ಮಾರ್ಚ್ 20ರಂದು ವಾಷಿಂಗ್ಟನ್ ಡಿಸಿಯಲ್ಲಿರುವ ವೈಟ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ಶಿಕ್ಷಣ ಇಲಾಖೆಯನ್ನು ರದ್ದುಗೊಳಿಸುವುದಾಗಿ ಅವರು ತಿಳಿಸಿದ್ದರು.
ಅಂದಹಾಗೆ ತಾವು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆಯೂ ಶಿಕ್ಷಣ ಇಲಾಖೆಯ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಆಗ ಅದನ್ನು ಮುಚ್ಚಲು ಟ್ರಂಪ್ ಸಾಕಷ್ಟು ಪ್ರಯತ್ನ ಮಾಡಿದ್ದರು. ಅಲ್ಲಿ ಆ ವೇಳೆ ಪೂರಕವಾದ ವಾತಾವರಣ ಇರಲಿಲ್ಲ. ಅಲ್ಲದೆ ತಮ್ಮ ಶಾಸಕಾಂಗ ಪಕ್ಷದಲ್ಲೂ ಹಲವಾರು ಭಿನ್ನಾಭಿಪ್ರಾಯಗಳೂ ಇದ್ದವು, ಆದರೆ ಇವುಗಳನ್ನೆಲ್ಲ ಮೀರಿಯೂ ಟ್ರಂಪ್ ತಮ್ಮ ಯತ್ನ ಮಾಡಿದ್ದರು, ಅದು ಕೈಗೂಡಿರಲಿಲ್ಲ. ಇಷ್ಟಾದರೂ ಸಹ ಟ್ರಂಪ್ ಶಿಕ್ಷಣ ಇಲಾಖೆಯನ್ನು ರದ್ದುಗೊಳಿಸುವ ತಮ್ಮ ನಿಲುವಿಗೆ ಬದ್ಧರಾಗಿಯೇ ಇರುವುದಾಗಿ ಪದೇ ಪದೇ ಹೇಳುತ್ತಿದ್ದರು.
ಶಿಕ್ಷಣ ಇಲಾಖೆಯೇ ದೊಡ್ಡ ವಂಚನೆಯಾಗಿದೆ..
ಇನ್ನೂ ಸದಾ ಕಾಲ ಶಿಕ್ಷಣ ಇಲಾಖೆಯನ್ನು ದೂರುತ್ತಿದ್ದ ಟ್ರಂಪ್ ಅದೊಂದು ದೊಡ್ಡ ವಂಚನೆಯಾಗಿದೆ ಎಂದು ಟೀಕಿಸಿದ್ದರು. ಶಿಕ್ಷಣ ಕಾರ್ಯದರ್ಶಿ ಹುದ್ದೆಗೆ ತಮ್ಮ ನಾಮನಿರ್ದೇಶಿತ ಲಿಂಡಾ ಮೆಕ್‌ಮಹೋನ್ ಅವರು ಇಲಾಖೆಯ ಸ್ಥಗಿತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡಬೇಕೆಂದು ಟ್ರಂಪ್ ಯೋಜಿಸಿದ್ದರು. ಅಲ್ಲದೆ ಎಡಪಂಥಿಯರು ಶಿಕ್ಷಣದಲ್ಲಿ ತಮಗೆ ಬೇಕಾದಂತೆ ನೀತಿಗಳನ್ನು ರೂಪಿಸಿದ್ದಾರೆ. ಅವರು ತಮ್ಮ ಸಿದ್ಧಾಂತಕ್ಕೆ ಬೆಂಬಲಿಸುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತಿದ್ದರು ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಅಲ್ಲದೆ ಅವರು ಮುಖ್ಯವಾಗಿ ಶಿಕ್ಷಣದ ಬದಲಾಗಿ ತಮ್ಮ ಐಡಿಯಾಲಜಿಯನ್ನೇ ಪ್ರಚಾರ ಪಡಿಸಲು ಶಿಕ್ಷಣ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದರು. ಇನ್ನೂ ಆ ಇಲಾಖೆಯ ನೀತಿಯಲ್ಲಿ ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳನ್ನು ಬೆಂಬಲಿಸುವಂತೆ ನೋಡಿಕೊಳ್ಳಲಾಗುತ್ತಿತ್ತು. ಈ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಧರ್ಮಬೋಧನೆ ಮಾಡುವ ದೊಡ್ಡ ಮಾರ್ಕ್ಸ್‌ವಾದಿ ಪಿತೂರಿಯ ಭಾಗವಾಗಿದೆ. ವಿದೇಶಗಳಲ್ಲೂ ಎಡ ಚಿಂತನೆಯ ಅಧ್ಯಯನಕ್ಕೆ ಅಮೆರಿಕ ಜನರ ತೆರಿಗೆ ದುಡ್ಡನ್ನು ಅನುದಾನವಾಗಿ ನೀಡಲಾಗುತ್ತದೆ ಎಂದು ಟ್ರಂಪ್ ಅಮೆರಿಕದಲ್ಲಿ ಆಡಳಿತ ನಡೆಸಿರುವ ಸರ್ಕಾರಗಳ ವಿರುದ್ಧ ಆರೋಪಿಸಿದ್ದರು.ಇನ್ನೂ 1979 ರಿಂದ ಶಿಕ್ಷಣ ಇಲಾಖೆ 3 ಲಕ್ಷ ಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದೆ. ಪ್ರತಿ ವಿದ್ಯಾರ್ಥಿಯ ಮೇಲೆ 245% ಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ ಈ ಖರ್ಚುಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ ಎನ್ನುವ ವಿಚಾರ ಟ್ರಂಪ್ ಮತ್ತಷ್ಟು ಕೆರಳುವಂತೆ ಮಾಡಿದೆ.
ಇನ್ನೂ ಶಿಕ್ಷಣ ಇಲಾಖೆಯನ್ನು ಮುಚ್ಚುವ ಗುರಿ ಹೊಂದಿರುವ ಟ್ರಂಪ್ ಅವರ ಆದೇಶದ ಹಿಂದೆ ಅಮೆರಿಕದ ತಮ್ಮ ಸರ್ಕಾರದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುವ ಮಹತ್ವದ ಉದ್ದೇಶವಿದೆ. ಅಂದಹಾಗೆ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವುದು, ಅನವಶ್ಯಕ ಸಿಬ್ಬಂದಿಗಳನ್ನು ಕಡಿತಗೊಳಿಸುವುದು ಹಾಗೂ ಶಿಕ್ಷಣ ಇಲಾಖೆಯ ಜೊತೆಗೆ, ಸರ್ಕಾರಿ ಕಾರ್ಯಗಳನ್ನು ಸುಗಮಗೊಳಿಸುವ ಪ್ರಯತ್ನದ ಭಾಗವಾಗಿ, ಟ್ರಂಪ್ ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ ಯುಎಸ್‌ಎಐಡಿ ಸೇರಿದಂತೆ ಹಲವು ಸಂಸ್ಥೆಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
ಚುನಾವಣೆಯಲ್ಲಿ ಭರವಸೆ ನೀಡಿದ್ದ ಟ್ರಂಪ್..
ಇನ್ನೂ ತಮ್ಮ ಚುನಾವಣಾ ಪ್ರಚಾರದಲ್ಲಿ ಜನರಿಗೆ ಭರವಸೆ ನೀಡಿರುವಂತೆಯೇ ಅಮೆರಿಕದ ಅಧ್ಯಕ್ಷ ಟ್ರಂಪ್ ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅದರಂತೆ ಇದೀಗ ಶಿಕ್ಷಣ ಇಲಾಖೆಯನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ. ಅಲ್ಲದೆ ಇತ್ತೀಚಿಗಷ್ಟೇ ನಡೆದಿದ್ದ ಎಲೆಕ್ಷನ್ ವೇಳೆ ಈ ವಿಚಾರವನ್ನೂ ಸಹ ಟ್ರಂಪ್ ತಮ್ಮ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಅಲ್ಲದೆ ಕೇಂದ್ರಕ್ಕೆ ಇರುವ ಅಧಿಕಾರವನ್ನು ಅಮೆರಿಕದ ರಾಜ್ಯಗಳಿಗೆ ಹಸ್ತಾಂತರ ಮಾಡುವುದಾಗಿಯೂ ಅವರು ಆಗ ತಿಳಿಸಿದ್ದರು. ಅಂದಹಾಗೆ ಟ್ರಂಪ್ ಸಹಿ ಮಾಡಿರುವ ಆದೇಶದಂತೆ ಈಗ ಶಿಕ್ಷಣ ಇಲಾಖೆಯಲ್ಲಿ ಅಮೆರಿಕ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಬದಲಿಗೆ ಆ ಎಲ್ಲ ಅಧಿಕಾರಗಳನ್ನು ಇನ್ನು ಮುಂದೆ ರಾಜ್ಯಗಳೇ ಚಲಾಯಿಸಲಿವೆ ಎನ್ನುವುದು ಗಮನಾರ್ಹವಾಗಿದೆ.