ನವದೆಹಲಿ : ಈ ಬಾರಿಯ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman)ಶೈಕ್ಷಣಿಕ ಕ್ಷೇತ್ರ(Academic field)ಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಇಂದು ಪೇಪರ್ ಲೆಸ್ ಬಜೆಟ್(Paperless Budget)ಮಂಡಿಸಿದರು. ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. ಕೊರೋನಾ ಹಿನ್ನೆಲೆ, ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂದರಿಂದ 12ನೇ ತರಗತಿವರೆಗೆ ‘ಒನ್ ಕ್ಲಾಸ್, ಒನ್ ಟಿವಿ ಚಾನಲ್‘ಯೋಜನೆ (Plans One Class, One TV Channel) ಜಾರಿಗೆ ತರಲಾಗುತ್ತಿದೆ. ಕೊರೋನಾ ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳಿದರು. ಪ್ರಧಾನಿ ಇ-ವಿದ್ಯಾ ಯೋಜನೆಯಡಿಯಲ್ಲಿ ದೂರದರ್ಶನ ಚಾನೆಲ್ಗಳ ಸಂಖ್ಯೆಯನ್ನು 12ರಿಂದ 200ಕ್ಕೆ ಹೆಚ್ಚಿಸಲಾಗುವುದು. ಪ್ರತೀ ತರಗತಿಗೆ ಟಿವಿ ಚಾನೆಲ್ ಮೂಲಕ ಪಾಠ ಮಾಡಲಾಗುವುದು. ಪ್ರಾದೇಶಿಕ ಭಾಷೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತದೆ. 200 ಟಿವಿ ಚಾನೆಲ್ಗಳ ಮೂಲಕ ಶೈಕ್ಷಣಿಕ ಅಭಿವೃದ್ದಿ ಮಾಡಲಿದ್ದೇವೆ ಎಂದರು. ಜೊತೆಗೆ ವಿಶ್ವದರ್ಜೆಯ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದರು. ಹಳ್ಳಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಅಂಗನವಾಡಿಗಳಿಗೆ ಆಡಿಯೋ-ವಿಡಿಯೋ ವ್ಯವಸ್ಥೆ ಕೂಡ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು. ಡಿಜಿಟಲ್ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಶಿಕ್ಷಕರಿಗೆ ಡಿಜಿಟಲ್ ಕೌಶಲ್ಯದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಸಚಿವರು ವಿವರಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಇ-ಕಂಟೆಂಟ್ ಲಭ್ಯವಾಗುವಂತೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.