Bhalki News: ಭಾಲ್ಕಿ: ಶಿಕ್ಷಣವೇ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಅಡಿಪಾಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಬೀದರ ಲೋಕಸಭಾ ಕ್ಷೇತ್ರದ ಸಂಸದ ಸಾಗರ ಈಶ್ವರ ಖಂಡ್ರೆ ಕರೆ ನೀಡಿದರು.

ನಗರದ ಕನಕ ಭವನದಲ್ಲಿ ತಾಲೂಕು ಗೊಂಡ (ಕುರುಬ) ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೊಂಡ (ಕುರುಬ) ಸಮಾಜದ ನೌಕರರ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಂಡು ನಿರಂತರ ಪರಿಶ್ರಮದಿಂದ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪವಾಡ ಪುರುಷ ಗೋಪಾಲ ಮಹಾರಾಜ್ ಉಚ್ಚಾ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಬೆಳೆಸಿದಾಗ ಮಾತ್ರ ಯಶಸ್ಸು ಸಾಧ್ಯ. ಗೊಂಡ (ಕುರುಬ) ಸಮಾಜದ ಜನರು ಪ್ರಾಮಾಣಿಕರು, ಶ್ರಮಜೀವಿಗಳು ಹಾಗೂ ಸರಳ ಸ್ವಭಾವದವರಾಗಿದ್ದು, ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಆಶಿಸಿದರು.

ಪಂಚ್ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಅಮೃತರಾವ ಚಿಮಕೊಡೆ ಮಾತನಾಡಿ, ಗೊಂಡ ಸಮಾಜವು ತನ್ನದೇ ಆದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಗೊಂಡ (ಕುರುಬ) ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್.ಟಿ.) ಪಟ್ಟಿಗೆ ಸೇರಿಸಲು ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.
ಗೊಂಡ (ಕುರುಬ) ನೌಕರರ ಸಂಘದ ಅಧ್ಯಕ್ಷ ಅರ್ಜುನರಾವ ಸೂರ್ಯವಂಶಿ ಮಾತನಾಡಿ, ಶಿಕ್ಷಣ, ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಆನಂದ ಹಳೆಂಬರ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳ ಹಿಂದೆ ಮಾತ್ರ ಓಡದೆ ಶಿಸ್ತು, ಸಮಯಪ್ರಜ್ಞೆ, ಪರಿಶ್ರಮ ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು. ಸೋಲು ಜೀವನದ ಅಂತ್ಯವಲ್ಲ, ಯಶಸ್ಸಿನ ಮೊದಲ ಮೆಟ್ಟಿಲು ಎಂಬುದನ್ನು ಅರಿತು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಗೊಂಡ (ಕುರುಬ) ನೌಕರರ ಭವನ ನಿರ್ಮಾಣ ಹಾಗೂ ಗೊಂಡ (ಕುರುಬ) ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್.ಟಿ.) ಪಟ್ಟಿಗೆ ಸೇರಿಸುವ ಕುರಿತು ಸಂಸದರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ 90ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಪದೋನ್ನತಿ ಪಡೆದ, ಸೇವಾ ನಿವೃತ್ತಿ ಹೊಂದಿದ ಹಾಗೂ ವಿಶೇಷ ಸಾಧನೆ ಮಾಡಿದ ನೌಕರರು, ನೂತನವಾಗಿ ಆಯ್ಕೆಯಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರು, ಗೊಂಡ (ಕುರುಬ) ನೌಕರರ ಸಂಘದ ನೂತನ ಹಾಗೂ ನಿಕಟಪೂರ್ವ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಜೈರಾಜ ಪಾತ್ರೆ ಮತ್ತು ಕಾರ್ಯದರ್ಶಿ ಸಂತೋಷ ಬಿ.ಜಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೀರಲಿಂಗದೇವ ಕನಕ ಗುರುಪೀಠ ತಿಂತಣಿ ಪೂಜ್ಯರು, ಜಿಲ್ಲಾ ಗೊಂಡ (ಕುರುಬ) ನೌಕರರ ಸಂಘದ ಅಧ್ಯಕ್ಷ ನಿರಂಜಪ್ಪ ಪಾತ್ರೆ ಸೇರಿದಂತೆ ಇತರರು ಮಾತನಾಡಿದರು.
ಖುಶಾಲರಾವ ಯರನಳ್ಳೆ, ವಿಜಯಕುಮಾರ ಡುಮ್ಮೆ, ಎಂ.ಎಸ್. ಕಟಗಿ, ಕೆ.ಡಿ. ಗಣೇಶ, ಬಾಲಾಜಿ ಖೇಡಕರ, ಬಾಲಾಜಿ ಜಬಾಡೆ, ಶ್ರೀನಿವಾಸ ಮೇತ್ರೆ, ರಾಜಕುಮಾರ ಜೋಳದಾಪಕೆ, ವೆಂಕಟ ಬಿರಾದಾರ, ಬಾಜಿರಾವ ಮೇತ್ರೆ, ಜಾಲಿಂದರ ಮೇತ್ರೆ, ಮಹಾನಂದಾ, ಅನ್ನಪೂರ್ಣಾ ಮೇತ್ರೆ, ಮಾಲಾಶ್ರೀ ತಳವಾಡೆ, ಸುನೀತಾ ಬರ್ಮಾ,ಆರತಿ ಮೇತ್ರೆ, ಸಂತೋಷ ಜಬಾಡೆ, ರಂಗರಾವ ಮೇತ್ರೆ, ಶಾಲಿವಾನ ಘೋದೆ, ವೆಂಕಟ ಮಲಗೊಂಡಾ, ಅಶೋಕ ಬರ್ಮಾ, ಧನರಾಜ ಮೇತ್ರೆ, ಡಾ. ಕಾಮರಾಯ ಜಗ್ಗಿನವರ ಸೇರಿದಂತೆ ಸಮಾಜದ ಮುಖಂಡರು, ನೌಕರರು, ಯುವಕರು, ವಿದ್ಯಾರ್ಥಿಗಳು ಹಾಗೂ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಣಮಶೇಟ್ಟಿ ಸಿದ್ದೇಶ್ವರೆ ಸ್ವಾಗತಿಸಿದರು,ದೇವಿದಾಸ ಮೇತ್ರೆ ನಿರೂಪಿಸಿದರು,ಚಂದ್ರಕಾಂತ ತಳವಾಡೆ ವಂದಿಸಿದರು.




