ನವದೆಹಲಿ: ‘ನಮ್ಮ ಯುವಜನತೆಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಒಂದು ವೇಳೆ ಕೆಲಸ ಸಿಗುವ ಅವಕಾಶವಿದ್ದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುತ್ತದೆ. ಭಾರತದ ಯುವಕರು ಇನ್ನು ಎಷ್ಟು ದಿನ ತಾಳ್ಮೆಯಿಂದಿರಬೇಕು’ ಎಂದು ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರೈತರ ಪ್ರತಿಭಟನೆ, ಲಖಿಂಪುರ ಖೇರಿ ಘಟನೆಗಳ ಬಗ್ಗೆ ತಮ್ಮದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ವರುಣ್ ಗಾಂಧಿ, ಈಗ ನಿರುದ್ಯೋಗ ಸಮಸ್ಯೆ ಬಗ್ಗೆಯೂ ಧ್ವನಿ ಎತ್ತಿದ್ದಾರೆ.
‘ದೇಶದ ಯುವಕರಿಗೆ ಮೊದಲೇ ಸರ್ಕಾರಿ ಕೆಲಸ ಸಿಗುತ್ತಿಲ್ಲ. ಒಂದಷ್ಟು ಅವಕಾಶಗಳು ಬಂದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುತ್ತದೆ. ಪರೀಕ್ಷೆ ಬರೆದರೆ ವರ್ಷಗಟ್ಟಲೆ ಫಲಿತಾಂಶವೇ ಬರುವುದಿಲ್ಲ. ರೈಲ್ವೆ ಗ್ರೂಪ್ ‘ಡಿ’ ಪರೀಕ್ಷೆಗಾಗಿ 1.25 ಕೋಟಿ ಯುವಕರು ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಅದೇ ರೀತಿ ಸೇನಾ ನೇಮಕಾತಿಯೂ ತಡವಾಗಿದೆ. ದೇಶದ ಯುವಕರು ಇನ್ನು ಎಷ್ಟು ದಿನ ತಾಳ್ಮೆಯಿಂದಿರಬೇಕು’ ಎಂದು ಬಿಜೆಪಿ ಯುವ ಸಂಸದ ಪ್ರಶ್ನಿಸಿದ್ದಾರೆ.