ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಅಫಿಡವಿಟ್ ನಲ್ಲಿ ಅಪೂರ್ಣ ಮಾಹಿತಿ ನೀಡಿರೋ ದೂರಿನನ್ವಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.
ನಾಮಪತ್ರ ಸಲ್ಲಿಕೆ ವೇಳೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ತಾವು 7.39ಕೋಟಿ ರೂಪಾಯಿ ಆಸ್ತಿಯ ಒಡೆಯ, ಅಲ್ಲದೆ 3.72ಕೋಟಿ ರೂಪಾಯಿ ಸಾಲ ಹೊಂದಿದ್ದಾಗಿ ನಮೂದಿಸಿದ್ದರು. ಆದರೆ ಅಫಿಡವಿಟ್ ನಲ್ಲಿದ್ದ ಮಾಹಿತಿಗಳಲ್ಲಿ ಎಲ್ಲವೂ ಅಪೂರ್ಣವಾಗಿದೆ. ಉದ್ದೇಶಪೂರ್ವಕವಾಗಿಯೇ ಮರೆಮಾಚಿದ್ದಾರೆ ಅಂತ ಬಿಜೆಪಿ ಅಭ್ಯರ್ಥಿ ಎ.ಮಂಜು ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಾಂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ರು. ಅಲ್ಲದೆ ಪ್ರಜ್ವಲ್ ಮತ್ತು ತಾಯಿ ಭವಾನಿ ರೇವಣ್ಣ ವಿವಿಧ ಕಂಪನಿಗಳಲ್ಲಿ ಹಣ ಹೂಡಿದ್ದಾರೆ ಹಾಗೆ ಹಾಸನದಲ್ಲಿ ಅವರ ಹೆಸರಲ್ಲಿ ಕಲ್ಯಾಣ ಮಂಟಪವಿದೆ. ಈ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಅಂತ ದೂರು ನೀಡಿದ್ರು.
ಈ ದೂರಿನ ಬಗ್ಗೆ ತನಿಖೆ ನಡೆಸಿದ ಚುನಾವಣಾ ಆಯೋಗ ಇದೀಗ ಪ್ರಜ್ವಲ್ ರೇವಣ್ಣ ಮೇಲೆ ಕ್ರಮ ಕೈಗೊಳ್ಳುವಂತೆ ಹಾಸನ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.