ಕ್ಯಾಂಟೀನಾ.. ರೋಗಗಳ ಗೂಡಾ? ಹುಬ್ಬಳ್ಳಿ ಇಂದಿರಾ ಕ್ಯಾಂಟೀನ್‌ ಅವ್ಯವಸ್ಥೆ!

ಕರ್ನಾಟಕದ ಸಂಜೀವಿನಿ ಎಂದು ಗುರುತಿಸಿಕೊಂಡಿರುವ ಹುಬ್ಬಳ್ಳಿ ಕೆ.ಎಂ.ಸಿ.ಆರ್.ಐ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನ ಪರಿಸ್ಥಿತಿ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಊಟ ಹಾಗೂ ಉಪಹಾರ ಸೇವಿಸುವವರಿಗೆ ಆರೋಗ್ಯದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕ್ಯಾಂಟೀನ್ ಮೇಲ್ಛಾವಣಿ ಸೋರಿಕೆ ಕಾಣಿಸುತ್ತಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಗೋಡೆಗಳು ಹಾಗೂ ಕೈ ತೊಳೆಯುವ ಸ್ಥಳಗಳಲ್ಲಿ ಶಿಲೀಂಧ್ರ (ಫಂಗಸ್) ಬೆಳೆದಿರುವುದು ಆತಂಕ ಹೆಚ್ಚಿಸಿದೆ.

ನೀರಿನ ಪೈಪ್‌ಲೈನ್ ವ್ಯವಸ್ಥೆ ಕಲುಷಿತವಾಗಿದ್ದು, ನಲ್ಲಿಗಳ ಸ್ಥಿತಿಯೂ ಅತ್ಯಂತ ಹದಗೆಟ್ಟಿದೆ. ಸಿಸಿ ಕ್ಯಾಮೆರಾ ವ್ಯವಸ್ಥೆ ಇಲ್ಲದಿರುವುದು ಮತ್ತು ನಿರ್ವಹಣೆಯ ಕೊರತೆಯೂ ಸ್ಪಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಕ್ಯಾಂಟೀನ್ ಸುತ್ತಮುತ್ತ ಸ್ವಚ್ಛತೆ ಇಲ್ಲದೆ ಗಲೀಜು ಮತ್ತು ದುರ್ವಾಸನೆ ವ್ಯಾಪಿಸಿದ್ದು, ಒಳಗಿನ ಶೌಚಾಲಯವೂ ಬಳಸಲು ಯೋಗ್ಯವಿಲ್ಲದ ಸ್ಥಿತಿಗೆ ತಲುಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೈ ತೊಳೆಯುವ ಸಿಂಕ್ ಹಾಗೂ ವರಾಂಡ ಕೂಡ ಅಶುದ್ಧತೆಯಿಂದ ತುಂಬಿಕೊಂಡಿದೆ ಎಂದು ಆರೋಪಗಳು ಕೇಳಿಬಂದಿವೆ.

ಪ್ರತಿದಿನ ಸುಮಾರು 500 ಜನರಿಗೆ ಊಟ ಹಾಗೂ ಉಪಹಾರ ಪೂರೈಸಲಾಗುತ್ತಿದ್ದು, ಇಂತಹ ಅಸ್ವಚ್ಛ ಪರಿಸರದಲ್ಲಿ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಪರಿಸ್ಥಿತಿಗೆ ತಕ್ಷಣ ಪರಿಹಾರ ಒದಗಿಸುವಂತೆ ಆಹಾರ ನಿರೀಕ್ಷಕರಿಗೂ ಮನವಿ ಮಾಡಲಾಗಿದೆ.

About The Author