ಮೆಟ್ ಗಾಲಾದಲ್ಲಿ ಲೀಸಾ ಇತಿಹಾಸ! ರೆಡ್ ಕಾರ್ಪೆಟ್ ಮೇಲೆ ಯಾರೆಲ್ಲಾ ಇರ್ತಾರೆ?

ಮೆಟ್ ಗಾಲಾ 2026 ಈ ಬಾರಿ ಇನ್ನಷ್ಟು ವಿಶೇಷವಾಗುತ್ತಿದೆ. ಮೇ 4ರಂದು ನಡೆಯಲಿರುವ ಈ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ಗೆ ಈಗಾಗಲೇ ವೇದಿಕೆ ಸಜ್ಜಾಗಿದ್ದು, ಈ ವರ್ಷದ ಪ್ರಮುಖ ಆಕರ್ಷಣೆಯಾಗಿ ಕೆ-ಪಾಪ್ ಗರ್ಲ್ ಗ್ರೂಪ್ ಬ್ಲ್ಯಾಕ್‌ಪಿಂಕ್ ಸದಸ್ಯೆ ಲೀಸಾ ಹೆಸರು ಹೊರಹೊಮ್ಮಿದೆ. ಲೀಸಾ ಈ ಬಾರಿ ಮೆಟ್ ಗಾಲಾದ ಹೋಸ್ಟ್ ಕಮಿಟಿಯಲ್ಲಿ ಸ್ಥಾನ ಪಡೆದಿದ್ದು, ಈ ಗೌರವ ಪಡೆದ ಮೊದಲ ಕೆ-ಪಾಪ್ ಐಡಲ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಜಾಗತಿಕ ಫ್ಯಾಷನ್ ವೇದಿಕೆಯಲ್ಲಿ ಕೆ-ಪಾಪ್ ಪ್ರಭಾವ ಮತ್ತಷ್ಟು ಬಲಗೊಂಡಿದೆ.

ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆಯಲಿರುವ ಈ ವರ್ಷದ ಕಾರ್ಯಕ್ರಮ “ಫ್ಯಾಷನ್ ಈಸ್ ಆರ್ಟ್” ಎಂಬ ಥೀಮ್‌ನಡಿ ನಡೆಯಲಿದೆ. ಸ್ಪ್ರಿಂಗ್ ಎಕ್ಸಿಬಿಷನ್‌ನಿಂದ ಪ್ರೇರಿತವಾಗಿರುವ ಈ ಈವೆಂಟ್‌ನಲ್ಲಿ ಕಲೆ ಮತ್ತು ಫ್ಯಾಷನ್ ನಡುವಿನ ಸಂಪರ್ಕವನ್ನು ವಿಶೇಷವಾಗಿ ಹೈಲೈಟ್ ಮಾಡಲಾಗುತ್ತದೆ. ಈ ವರ್ಷದ ಆತಿಥೇಯರ ಪಟ್ಟಿಯಲ್ಲಿ ಲೀಸಾ ಜೊತೆಗೆ ಸಬ್ರಿನಾ ಕಾರ್ಪೆಂಟರ್, ಡೋಜಾ ಕ್ಯಾಟ್, ಸ್ಯಾಮ್ ಸ್ಮಿತ್, ಟೆಯಾನಾ ಟೇಲರ್, ಗ್ವೆಂಡೋಲಿನ್ ಕ್ರಿಸ್ಟಿ, ಎಲಿಜಬೆತ್ ಡೆಬಿಕಿ, ಲೀನಾ ಡನ್‌ಹ್ಯಾಮ್, ಕ್ಲೋಯ್ ಮಲ್ಲೆ, ಲಾರೆನ್ ವಾಸರ್ ಹಾಗೂ ಅ’ಜಾ ವಿಲ್ಸನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಇದ್ದಾರೆ.

ಇದೇ ವೇಳೆ ಈ ವರ್ಷದ ಮೆಟ್ ಗಾಲಾದ ಅಧ್ಯಕ್ಷರಾಗಿ ಬಿಯಾನ್ಸ್ ಸಹ-ಅಧ್ಯಕ್ಷರಾಗಿ ಮರಳುತ್ತಿದ್ದಾರೆ. ಅವರೊಂದಿಗೆ ನಿಕೋಲ್ ಕಿಡ್ಮನ್ ಮತ್ತು ವೀನಸ್ ವಿಲಿಯಮ್ಸ್ ಕೂಡ ನಾಯಕತ್ವದಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ಸಂಗೀತ, ಸಿನಿಮಾ ಮತ್ತು ಕ್ರೀಡೆಗಳ ಶಕ್ತಿಶಾಲಿ ಸಂಯೋಜನೆ ಈ ಬಾರಿ ಮೆಟ್ ಗಾಲಾದ ವಿಶೇಷತೆ ಆಗಲಿದೆ. ಲೀಸಾ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲೂ ಭಾಗವಹಿಸಿದ್ದ ಮೊದಲ ಕೆ-ಪಾಪ್ ಕಲಾವಿದೆಯಾಗಿದ್ದರು. ಇದೀಗ ಮೆಟ್ ಗಾಲಾ ಹೋಸ್ಟ್ ಸ್ಥಾನದಿಂದ ಅವರು ಮತ್ತೊಮ್ಮೆ ಜಾಗತಿಕ ಐಕಾನ್ ಆಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ.

ಈ ವರ್ಷದ ಮೆಟ್ ಗಾಲಾದಲ್ಲಿ ಸುಮಾರು 200 ವಿಶೇಷ ಉಡುಪುಗಳು ಹಾಗೂ 200 ಕಲಾ ಪ್ರದರ್ಶನ ವಸ್ತುಗಳು ಪ್ರದರ್ಶಿಸಲಾಗಲಿವೆ. ಈ ಮೂಲಕ ಫ್ಯಾಷನ್ ಮತ್ತು ಕಲೆಯ ಐತಿಹಾಸಿಕ ಸಂಬಂಧವನ್ನು ಮತ್ತಷ್ಟು ಎತ್ತಿಹಿಡಿಯಲಿದೆ. ಮೆಟ್ ಗಾಲಾ ರೆಡ್ ಕಾರ್ಪೆಟ್ ಕಾರ್ಯಕ್ರಮ ಮೇ 4ರಂದು ಸಂಜೆ 6 ಗಂಟೆಗೆ (EDT) ವೋಗ್ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.

About The Author