Hubli News: ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತಾಗಿದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆ.. ಎಸ್ ಐ ಆರ್ ನೆಪದಲ್ಲಿ ತಮ್ಮ ಮೂಲ ಕರ್ತವ್ಯಕ್ಕೆ ಚೆಕ್ಕರ್ ಹೊಡೆಯುತ್ತಿದ್ದಾರೆ. ಇದರಿಂದಾಗಿ ಸಕಾಲದಲ್ಲಿ ಅಗತ್ಯ ದಾಖಲೆಗಳು ಲಭ್ಯವಾಗದೆ, ಜನ ಸಂಕಷ್ಟ ಎದುರಿಸುತ್ತಿದ್ದಾರೆ.. ಪಾಲಿಕೆ ಅಧಿಕಾರಿಗಳ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ.
ಮಹಾನಗರ ಪಾಲಿಕೆಯ ಸಿಬ್ಬಂದಿ ಎಸ್ಐಆರ್ ಕೆಲಸದ ನೆಪ ಹೇಳಿಕೊಂಡು ಮೂಲ ಕರ್ತವ್ಯವನ್ನೇ ಮರೆತಿದ್ದಾರಾ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಕಳೆದ ಇಪ್ಪತ್ತು ದಿನಗಳಿಂದ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪ್ರಮುಖ ವಿಭಾಗಗಳಲ್ಲೇ ಸಿಬ್ಬಂದಿ ಕಾಣೆಯಾಗಿದ್ದು, ಜನರು ಅಗತ್ಯ ದಾಖಲೆಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಎಸ್ಐಆರ್ ಜೊತೆಗೆ ಮೂಲ ಕರ್ತವ್ಯಕ್ಕೂ ಮೊದಲ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದರೂ, ಅಧಿಕಾರಿಗಳು ಅದನ್ನು ಗಾಳಿಗೆ ತೂರಿದ್ದಾರಾ ಎಂಬ ಆರೋಪ ಕೇಳಿಬಂದಿದೆ.
ಜನಸೇವೆಗೆಂದೇ ಇರುವ ಸರ್ಕಾರಿ ಕಚೇರಿಗಳಿವು… ಆದರೆ ಈಗ ಈ ಕಚೇರಿಗಳ ಸ್ಥಿತಿ ನೋಡಿದರೆ, ಇದು ಸರ್ಕಾರಿ ಕಚೇರಿಯೋ… ಇಲ್ಲವೇ ರಜಾ ದಿನದ ಕಟ್ಟಡವೋ ಎಂಬ ಅನುಮಾನ ಮೂಡುತ್ತದೆ.ಹುಬ್ಬಳ್ಳಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಲ್ಲಿರುವ ಜನನ-ಮರಣ ನೋಂದಣಿ ವಿಭಾಗ, ಇ-ಸ್ವತ್ತು, ಕಟ್ಟಡ ನಿರ್ಮಾಣ ಅನುಮತಿ, ಡಿಟಿಟಿಪಿ, ಪರವಾನಗಿ ಸೇರಿದಂತೆ ಸಾರ್ವಜನಿಕರಿಗೆ ಅತ್ಯಂತ ಅಗತ್ಯವಾದ ವಿಭಾಗಗಳು ಬಹುತೇಕ ಖಾಲಿಯಾಗಿವೆ. ಅಧಿಕಾರಿಗಳು, ಸಿಬ್ಬಂದಿ ಇಲ್ಲದೇ ಕೌಂಟರ್ಗಳು ಬಿಕೋ ಎನ್ನುತ್ತಿವೆ.ಕಳೆದ ಇಪ್ಪತ್ತು ದಿನಗಳಿಂದ ಇದೇ ದೃಶ್ಯ. ನಿತ್ಯ ನೂರಾರು ಜನ ಕೆಲಸ ಕಾರ್ಯ ಬಿಟ್ಟು ದಾಖಲೆಗಳಿಗಾಗಿ ಪಾಲಿಕೆಗೆ ಬರುತ್ತಿದ್ದಾರೆ. ಆದರೆ ಕಚೇರಿಗಳಲ್ಲಿ ಸಿಬ್ಬಂದಿಯೇ ಇಲ್ಲದ ಕಾರಣ ಬೆಳಗ್ಗೆಯಿಂದ ಸಂಜೆವರೆಗೆ ಅಲೆದಾಡಿ ಬರಿಗೈಯಲ್ಲಿ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಆಶ್ಚರ್ಯದ ಸಂಗತಿ ಏನೆಂದರೆ, ಎಸ್ಐಆರ್ ಕಾರ್ಯದ ಜೊತೆಗೆ ಸಾರ್ವಜನಿಕ ಸೇವೆಯನ್ನೂ ಸಮಾನವಾಗಿ ನಿರ್ವಹಿಸಬೇಕು, ಮೂಲ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸರ್ಕಾರವೇ ಸ್ಪಷ್ಟ ಸೂಚನೆ ನೀಡಿದೆ.ಆದರೆ ನೆಲಮಟ್ಟದಲ್ಲಿ ಆಗುತ್ತಿರುವುದೇ ಬೇರೆ. ಎಸ್ಐಆರ್ ಹೆಸರನ್ನು ಮುಂದಿಟ್ಟು ಹಲವರು ಕಚೇರಿಯತ್ತ ಮುಖ ಮಾಡುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಕೆಲವರು ಎಸ್ಐಆರ್ ಕರ್ತವ್ಯವೆಂಬ ನೆಪ ಹೇಳಿ ಮನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎನ್ನುವ ದೂರುಗಳೂ ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಇದರ ನೇರ ಹೊಡೆತ ಬೀಳುತ್ತಿರುವುದು ಸಾಮಾನ್ಯ ಜನರ ಮೇಲೆಯೇ. ಒಂದು ಜನನ ಪ್ರಮಾಣಪತ್ರ, ಒಂದು ಮರಣ ಪ್ರಮಾಣಪತ್ರ, ಒಂದು ಇ-ಸ್ವತ್ತು, ಒಂದು ಕಟ್ಟಡ ಪರವಾನಗಿ ಪಡೆಯಲು ಜನರು ದಿನಗಟ್ಟಲೆ ಅಲೆದಾಡಬೇಕಾಗಿದೆ.ಸರ್ಕಾರದ ಆದೇಶ ಒಂದೆಡೆ… ಪಾಲಿಕೆಯ ನಿರ್ಲಕ್ಷ್ಯ ಮತ್ತೊಂದೆಡೆ… ಮಧ್ಯೆ ಸಾರ್ವಜನಿಕರ ನರಳಾಟ. ಎಸ್ಐಆರ್ ಹೆಸರಿನಲ್ಲಿ ಜನಸೇವೆಯನ್ನೇ ಬೀಗ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಚೇರಿಗಳಲ್ಲಿ ಸಿಬ್ಬಂದಿಯ ಹಾಜರಾತಿ ಖಚಿತಪಡಿಸಿ, ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕಿದೆ. ಇಲ್ಲವಾದರೆ, ಎಸ್ಐಆರ್ ನೆಪ… ಜನಸೇವೆಗೆ ಬೀಗ ಎಂಬ ಆರೋಪ ಇನ್ನಷ್ಟು ಬಲಗೊಳ್ಳಲಿದೆ ಎನ್ನುವುದು ಹುಬ್ಬಳ್ಳಿ ಧಾರವಾಡ ನಾಗರಿಕ ಮಾತು..
ಕ್ಯಾಮೆರ ಪರ್ಸನ್ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




